ಜಿಲ್ಲೆ

ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಕೋಟ್ಯಂತರ ರೂ. ಅವ್ಯವಹಾರ

ಪಾಂಡವಪುರ: ಪಾಂಡವಪುರ ಕಸಬಾ ಕೃಷಿ ಪತ್ತಿನ ಸಹಕಾರ ಸಂಘ (ಪಿಎಸಿಎಸ್)ದಲ್ಲಿ ನಡೆದಿರುವ ಕೋಟ್ಯಂತರ ರೂ. ಅವ್ಯವಹಾರ ಹಾಗೂ ರೈತರ ಚಿನ್ನಾಭರಣಗಳ ದುರ್ಬಳಕೆ ವಿಚಾರವನ್ನು ಸದನದಲ್ಲಿ ಪ್ರಶ್ನಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಗತ್ಯ ಕ್ರಮಕ್ಕೆ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ಕಸಾಬಾ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟಾರೆ 4.5 ಕೋಟಿ ರೂ. ಅವ್ಯವಹಾರ ನಡೆದಿರುವ ಬಗ್ಗೆ ಸೂಕ್ತ ತನಿಖೆ ಆಗಬೇಕು. ರೈತರು ತರಕಾರಿ, ಸೊಪ್ಪು ಬೆಳೆದು ಕಷ್ಟಪಟ್ಟು ಉಳಿತಾಯ ಹಣವನ್ನು ಡೆಪಾಸಿಟ್ ಮಾಡಿದ್ದಾರೆ. ಸೊಸೈಟಿಯಲ್ಲಿ ಅಡವಿಟ್ಟಿದ್ದ ರೈತರ ಚಿನ್ನಾಭರಣಗಳನ್ನು ಜಿಲ್ಲಾ ಬ್ಯಾಂಕಿನ ಲಾಕರ್‌ನಲ್ಲಿ ಜೋಪಾನಪಡಿಸಬೇಕು. ಆದರೆ ಸಂಘದ ನೌಕರರು ಒಡವೆಗಳನ್ನು ಲಾಕರ್‌ನಿಂದ ತೆಗೆದು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಗಿರಿವಿ ಇಟ್ಟು ರೈತರನ್ನು ವಂಚಿಸಿದ್ದಾರೆ. ಇದೇ ರೀತಿ ಜಿಲ್ಲೆಯ ವಿವಿಧ ಸಹಕಾರ ಸಂಘಗಳಲ್ಲಿ ರೈತರ ಹಣ ದುರುಪಯೋಗವಾಗುತ್ತಿದೆ. ಖಾಸಗಿ ಆಡಿಟರ್‌ಗಳಿಂದ ಆಡಿಟ್ ಮಾಡಿಸಿ ಷೇರುದಾರರಿಗೆ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಡಿಸಿಸಿ ಬ್ಯಾಂಕ್ ಸೂಪರ್‌ವೈಸರ್‌ಗಳು, ಖಾಸಗಿ ಆಡಿಟರ್‌ಗಳು ಹಾಗೂ ಸಂಘದ ನೌಕರರು ಎಲ್ಲ ಸೇರಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 80ಕ್ಕೂ ಹೆಚ್ಚು ಸಹಕಾರ ಸಂಘಗಳಲ್ಲಿ ಹಣ ದುರುಪಯೋಗವಾಗಿರುವ 64 ಅಡಿಯಲ್ಲಿ ತನಿಖೆಗೆ ದಾಖಲಾಗಿದೆ. ಅದೇ ರೀತಿ ಜಿಲ್ಲೆಯಲ್ಲಿ 167 ಕೃಷಿಪತ್ತಿನ ಸಹಕಾರ ಸಂಘಗಳು ತನಿಖೆ ಒಳಪಟ್ಟಿದೆ. ರಾಜ್ಯದಲ್ಲಿ ಶೇ.40ಕ್ಕಿಂತ ಸಂಘಗಳಲ್ಲಿ ಈ ರೀತಿ ಪ್ರಕರಣಗಳು ದಾಖಲಾಗಿದೆ. ಹಣ ದುರ್ಬಳಕೆ ಆಗಿರುವ ಬಗ್ಗೆ 64 ಅಡಿಯಲ್ಲಿ ತನಿಖೆ ನಡೆಸಿ ಹಣ ವಸೂಲಾತಿಗೆ ಕ್ರಮ ಕೈಗೊಳ್ಳುವ ಭರವಸೆ ಇತ್ತು ಸುಮ್ಮನಾಗುತ್ತಿದ್ದೇವೆ. ವಾಸ್ತವವಾಗಿ ಹಣ ದುರ್ಬಳಕೆ ಮಾಡಿಕೊಂಡವರು ಮನೆಯಲ್ಲಿ ನೆಮ್ಮದಿಯಾಗಿ ಇರುತ್ತಾರೆ. ಇಂತಹ ಪ್ರಕರಣಗಳು ರಾಜ್ಯದಲ್ಲಿ ಸಾಮಾನ್ಯವಾಗಿಬಿಟ್ಟಿದೆ. ಈ ಪ್ರಕರಣಗಳು ನಡೆಯದಂತೆ ಕ್ರಮ ಕೈಗೊಳ್ಳದಿದ್ದರೆ ರೈತರು ಸಹಕಾರ ಸಂಘಗಳಲ್ಲಿನ ಮೇಲೆ ವಿಶ್ವಾಸ ಕಳೆದುಕೊಂಡು ತಮ್ಮ ಕಷ್ಟ ಕಾಲಕ್ಕೆ ಅಗತ್ಯವಾದ ಹಣ ಪಡೆಯಲು ಖಾಸಗಿ ಹಣಕಾಸು ಸಂಸ್ಥೆಗಳಲ್ಲಿ ಚಿನ್ನಾಭರಣ ಗಿರಿವಿ ಇಡುತ್ತಾರೆ. ಇದನ್ನು ತಪ್ಪಿಸಲು ಸರ್ಕಾರ ಉನ್ನತ ಸಮಿತಿಯೊಂದನ್ನು ರಚನೆ ಮಾಡಬೇಕು ಎಂದು ಒತ್ತಾಯಿಸಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪ್ರಶ್ನೆಗೆ ಉತ್ತರ ನೀಡಿದ ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾತನಾಡಿ, ಸಹಕಾರ ಸಂಘಗಳು ರೈತರ ಹಣವನ್ನಲ್ಲದೇ ಜಿಲ್ಲಾ ಬ್ಯಾಂಕಿನ ಹಣವನ್ನು ತಿಂದಿರುವ ಬಗ್ಗೆ ಗಮನಕ್ಕೆ ಬಂದಿದೆ. ಇದನ್ನು ತಡೆಯಲು ಸ್ಟೀರಿಂಗ್ ಕಮಿಟಿ ಮಾಡಿ ಎಂದು ದರ್ಶನ್ ಪುಟ್ಟಣ್ಣಯ್ಯ ಮನವಿ ಮಾಡಿದ್ದಾರೆ. ಸಹಕಾರ ಸಂಘಗಳ ವ್ಯವಹಾರಗಳನ್ನು ಮೇಲೆ ನಿಗಾ ಇಡಲು ಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ನಿಬಂಧಕರನ್ನು ಒಳಗೊಂಡಂತೆ ಕಾಮನ್ ಕೇಡರ್ ಅಥಾರಿಟಿ ಎಂಬ ಸಮಿತಿ ಪರಿಶೀಲನೆ ನಡೆಸಿ 128ಎ1ರಡಿಯಲ್ಲಿ ಕ್ರಮ ಕೈಗೊಳ್ಳುತ್ತಿತ್ತು. ಆದರೆ ವೈದ್ಯನಾಥ್ ವರದಿ ಜಾರಿಗೆ ಬಂದ ನಂತರ ಆ ಸಮಿತಿ ರದ್ದಾಯಿತು. ಅದರ ಜತೆ 128ಎ(1) ಕೂಡ ರದ್ದಾಯಿತು. ನಾವು ಕಳೆದ ಅಧಿವೇಶನದಲ್ಲಿ ಇದನ್ನು ಮರು ರಚಿಸಬೇಕು ಎಂದು ತೀರ್ಮಾನಿಸಿ ರಾಜ್ಯಪಾಲರ ಅಂಕಿತ ಕಳುಹಿಸಿಕೊಟ್ಟಿದ್ದೆವು. ರಾಜ್ಯಪಾಲರ ಅಂಕಿತವೂ ಆಗಿತ್ತು. ಆದರೆ ಕೆಲವು ಪಟ್ಟಾಭದ್ರ ಶಕ್ತಿಗಳು ನ್ಯಾಯಾಲಯದಲ್ಲಿ ಇದಕ್ಕೆ ತಡೆಯಾಜ್ಞೆ ತಂದಿದ್ದಾರೆ ಎಂದು ವಿವರಿಸಿದರು.

ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಆಗ್ರಹ: ಪಾಂಡವಪುರ ಪಟ್ಟಣದಲ್ಲಿ 30 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಒಳಚರಂಡಿ ವ್ಯವಸ್ಥೆ ಅಧ್ವಾನಗೊಂಡಿದೆ. ಇದರಿಂದ ಪಟ್ಟಣದ ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಕಳೆದ 18 ವರ್ಷಗಳಿಂದ ಹಿಂದೆ 2006ರಲ್ಲಿ ಪ್ರಾರಂಭಗೊಂಡ ಯುಜಿಡಿ ಕಾಮಗಾರಿ ಮುಕ್ತಾಯ ಕಂಡಿಲ್ಲ. ಇದಕ್ಕೆ ಇದ್ದ ಜಮೀನು ಸಮಸ್ಯೆಯನ್ನು ಪರಿಹರಿಸಲಾಗಿದೆ. ನೀರು ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ನೀಡಬೇಕು ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸಚಿವ ಖಂಡ್ರೆ ಈಗಾಗಲೇ ಒಂದು ಹಂತದ ಹಣಬಿಡುಗಡೆ ಮಾಡಲಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಹೆಚ್ಚುವರಿ ಹಣವನ್ನು ಬಿಡುಗಡೆ ಮಾಡುವ ಬಗ್ಗೆ ಭರವಸೆ ನೀಡಿದರು.