ಜಿಲ್ಲೆ

ಕೃಷಿ ಪಂಪ್'ಸೆಟ್'ಗೆ ಮೀಟರ್ ಹಾಕಿದ್ದರೆ ನಾನೇ ಮೊದಲು ಕಿತ್ತು ಹಾಕುವೆ: ಮಧು ಬಂಗಾರಪ್ಪ

ಮೈಸೂರು: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಬಿಜೆಪಿ ಸರ್ಕಾರ ಮುಂದಾಗಿದ್ದು, ಹಾಗೆ ಮಾಡಿದರೆ ಅದನ್ನು ನಾನೇ ಮೊದಲು ಕಿತ್ತುಹಾಕುವೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ಮಧು ಬಂಗಾರಪ್ಪ ಗುಡುಗಿದರು.

ನಗರ ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ಎಸ್.ಬಂಗಾರಪ್ಪ ಅವರು 10 ಎಚ್‌ಪಿ ಕೃಷಿ ಪಂಪ್‌ಸೆಟ್‌ಗೆ ಉಚಿತವಾಗಿ ವಿದ್ಯುತ್ ನೀಡಿದ್ದರು. ಇದು ಈಗಲೂ ಮುಂದುವರಿಯುತ್ತಿದೆ. ಆದರೆ, ಬಿಜೆಪಿ ಸರ್ಕಾರ ವಿದ್ಯುತ್ ಖಾಸಗೀಕರಣಗೊಳಿಸಿ, ಕೃಷಿ ಪಂಪ್‌ಸೆಟ್‌ಗೂ ಮೀಟರ್ ಅಳವಡಿಕೆಗೆ ಮುಂದಾಗಿದೆ. ಇದಕ್ಕೆ ಅವಕಾಶ ನೀಡಲ್ಲ. ಬಂಗಾರಪ್ಪ ಮಗನಾಗಿ ಮೊದಲು ಮೀಟರ್ ಕಿತ್ತು ಹಾಕುತ್ತೇನೆ ಎಂದರು.

ಕೃಷಿ ಉತ್ಪಾದನಾ ವೆಚ್ಚ ಅಧಿಕವಾಗಿದೆ. ರಸಗೊಬ್ಬರ ದರ 1800 ರೂ. ದಾಟಿದೆ. ಕೃಷಿ ಯಂತ್ರೋಪಕರಣ, ಟ್ರಾೃಕ್ಟರ್‌ಗೆ ಬಳಕೆ ಮಾಡುವ ಡಿಸೇಲ್ ಬೆಲೆಯೂ ಗಗನಮುಟ್ಟಿದೆ. ಇದರಿಂದ ರೈತರು, ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೂ ಬೆಲೆ ಏರಿಕೆ ನಿಯಂತ್ರಿಸಲು ಏನೂ ಕ್ರಮ ಕೈಗೊಳ್ಳದ ಬಿಜೆಪಿ ಸರ್ಕಾರ, ಮನೆಯಲ್ಲೇ ಕುಳಿತು ಆಕಾಶದಲ್ಲಿ ವಿಮಾನ, ಹೆಲಿಕಾಪ್ಟರ್ ತೋರಿಸುತ್ತಿದೆ. ಅಲ್ಲದೆ, ಧರ್ಮ-ಧರ್ಮಗಳ ನಡುವೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.


ಕೆಪಿಸಿಸಿ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷನಾಗಿ ಈಗಿನಿಂದಲೇ ಪ್ರಣಾಳಿಕೆ ಸಿದ್ಧತೆಯ ಕೆಲಸ ನಡೆಸಲಾಗುತ್ತಿದೆ. ಇದು ಕಾಂಗ್ರೆಸ್‌ನ ಬದ್ಧತೆ. ಆದರೆ, ಬಿಜೆಪಿಗೆ ಇದು ಇಲ್ಲ. ಅದಕ್ಕೆ ದಿಕ್ಕು ದೆಸೆಯೇ ಇಲ್ಲ. ಮಾನವೀಯತೆಯೂ ಇಲ್ಲ. ಧರ್ಮ-ಜಾತಿ ಹೆಸರಿನಲ್ಲಿ ದ್ವೇಷ ಬಿತ್ತಿ, ಮತ್ತೆ ಅಧಿಕಾರಕ್ಕೆ ಬರಲು ಯತ್ನಿಸುತ್ತಿದೆ. ಅದು ಎಂದಿಗೂ ಸ್ವಂತ ಶಕ್ತಿಯಿಂದ ಮೇಲೆ ಬಂದಿಲ್ಲ. ಬೇರೆಯವರನ್ನು ತುಳಿದು ಅಧಿಕಾರವನ್ನು ಹಿಡಿಯುತ್ತದೆ ಎಂದು ಹರಿಹಾಯ್ದರು.


ದೇಶ-ರಾಜ್ಯಕ್ಕೆ ಕಾಂಗ್ರೆಸ್ ಅಗತ್ಯವಿದೆ. ಪಕ್ಷದ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿರ್ವಹಣೆ ಮಾಡುವ ಮೂಲಕ ಪಕ್ಷಕ್ಕೆ ಕಾಣಿಕೆ ನೀಡಬೇಕು. ಕಾಂಗ್ರೆಸ್‌ಗೆ ಹಿಂದುಳಿದ ವರ್ಗಗಳ ಮತಗಳು ಮೂಲ ಆಧಾರ. ಇದುವೇ ಪಕ್ಷದ ಶಕ್ತಿ. ಈ ಸಮುದಾಯದ ಬಲದಿಂದಲೇ ಪಕ್ಷ ಬಹಳಷ್ಟು ಸಲ ಅಧಿಕಾರಕ್ಕೆ ಬಂದಿದೆ. ಆದರೆ, ಇತ್ತೀಚಿನ ಚುನಾವಣೆಗಳಲ್ಲಿ ಈ ಮತಗಳು ಚದುರಿ ಹೋಗಿವೆ. ಈ ಮತಗಳನ್ನು ಕ್ರೋಡೀಕರಣ ಮಾಡಲು ಮುಂದಾಗಿದ್ದು, ಪ್ರತಿ ಜಿಲ್ಲೆಯಲ್ಲೂ ಹಿಂದುಳಿದ ವರ್ಗಗಳ ಸಮಾವೇಶ ಆಯೋಜಿಸಲಾಗುವುದು. ಇದು ಮೈಸೂರು ಜಿಲ್ಲೆಯಲ್ಲೂ ನಡೆಯಲಿದೆ. ಶಿವಮೊಗ್ಗದಲ್ಲಿ ರಾಜ್ಯ ಮಟ್ಟದ ಒಬಿಸಿ ಸಮಾವೇಶ ನಡೆಯಲಿದೆ. ಇದಕ್ಕೆ ಪ್ರತಿಯೊಬ್ಬ ಕಾರ್ಯಕರ್ತರೂ ಸಹಕಾರ ನೀಡಬೇಕು ಎಂದು ಕೋರಿದರು.


ನಾನು ಕೆಪಿಸಿಸಿ ಒಬಿಸಿ ಘಟಕದ ಅಧ್ಯಕ್ಷನಾದ ಬಳಿಕ ಒಬಿಸಿ ಸಮಿತಿಯನ್ನು ಮರು ರಚನೆ ಮಾಡಲಾಗುತ್ತಿದೆ. ಜಿಲ್ಲಾ, ತಾಲೂಕು, ನಗರ ಸಮಿತಿಗಳಿಗೆ ಹೊಸದಾಗಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಅದಕ್ಕಾಗಿ ಪಕ್ಷದ ಜಿಲ್ಲಾ ಸಮಿತಿಯಿಂದ ಅರ್ಹ, ಸೂಕ್ತ ವ್ಯಕ್ತಿಗಳ ಹೆಸರನ್ನು ಶಿಫಾರಸು ಮಾಡಬೇಕು ಎಂದು ತಿಳಿಸಿದರು.


ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಮುಖಂಡ ಶಿವಮಲ್ಲು ಇನ್ನಿತರರು ಇದ್ದರು.