ಚಿತ್ರದುರ್ಗ: ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ನಿತ್ಯ ಹಗಲು 4, ರಾತ್ರಿ 3 ಸೇರಿ 7 ತಾಸು ಸಮರ್ಪಕವಾಗಿ ತ್ರಿಫೇಸ್ ವಿದ್ಯುತ್ ಪೂರೈಸಬೇಕು. ಅದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಿ. ಇದರಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲವೆಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ಇಂಧನ ಇಲಾಖೆ ವಿಷಯಗಳ ಕುರಿತು ಮಂಗಳವಾರ ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳೊಂದಿಗೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಪ್ರಸ್ತುತ ಯಾವುದೇ ಲೋಡ್ ಶೆಡ್ಡಿಂಗ್ ಇಲ್ಲ. 19,500 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಇದ್ದು, ಇದಕ್ಕಾಗಿ ಸಬ್ ಸ್ಟೇಷನ್‌ಗಳು ಹಾಗೂ ಟ್ರಾನ್ಸ್ಮಿಷನ್ ಕೇಂದ್ರಗಳು ಸಮರ್ಪಕವಾಗಿರಬೇಕು ಎಂದರು.
ಈ ಜಿಲ್ಲೆಗೆ 100 ಉಪಕೇಂದ್ರಗಳನ್ನು ಕೊಡಲಾಗುತ್ತಿದೆ. ಈ ವರ್ಷ 50 ಪೂರ್ಣಗೊಳ್ಳಲಿದ್ದು, ಮುಂದಿನ ವರ್ಷ ಇನ್ನುಳಿದವು ಕಾರ್ಯಾರಂಭ ಮಾಡಲಿವೆ. ಸಬ್‌ಸ್ಟೇಷನ್‌ಗಳ ಸಮಸ್ಯೆ ಇದ್ದರೆ, ಆಯಾ ಶಾಸಕರ ಗಮನಕ್ಕೆ ತಂದು ಬಗೆಹರಿಸಿಕೊಳ್ಳಿ. ಅಗತ್ಯವಿದ್ದಲ್ಲಿ ಹೊಸ ಉಪಕೇಂದ್ರಗಳಿಗೆ ಪ್ರಸ್ತಾವ ಸಲ್ಲಿಸಿ, ವಿದ್ಯುತ್ ಪೂರೈಕೆಗೆ ಕ್ರಮವಹಿಸಬೇಕು ಎಂದು ಹೇಳಿದರು.
ಇ-ಆಫೀಸ್ ಅನುಷ್ಠಾನ ಮಾಡಿ: ರೈತರು, ಸಾರ್ವಜನಿಕರ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ಹಾಗೂ ಕಚೇರಿಗಳಿಗೆ ಅಲೆದಾಟ ತಪ್ಪಿಸುವ ನಿಟ್ಟಿನಲ್ಲಿ ಕಡ್ಡಾಯವಾಗಿ ಇ-ಆಫೀಸ್ ಅನುಷ್ಠಾನ ಮಾಡುವಂತೆ ಸೂಚಿಸಿದರು.
ಕೆಪಿಟಿಸಿಎಲ್‌ನ ಉಪಕೇಂದ್ರ ಇರುವೆಡೆ ಬೆಸ್ಕಾಂ ಲಿಂಕ್‌ಲೈನ್ ವ್ಯವಸ್ಥೆ ತಕ್ಷಣ ಮಾಡಬೇಕೆಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್‌ಕುಮಾರ್ ಪಾಂಡೆ ತಿಳಿಸಿದರು.
ಎಂಎಲ್ಸಿ ಕೆ.ಎಸ್.ನವೀನ್ ಮಾತನಾಡಿ, ಇಂಧನ ಇಲಾಖೆಯಲ್ಲಿ ಲೈನ್‌ಮೆನ್ ಸೇರಿ ಕೆಳಹಂತದ ಅಧಿಕಾರಿ, ಸಿಬ್ಬಂದಿಗಳು ಬಹಳ ವರ್ಷಗಳಿಂದಲೂ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದು, ಹಿರಿಯ ಅಧಿಕಾರಿಗಳ, ಜನಪ್ರತಿನಿಧಿಗಳ ಮಾತಿಗೆ ಬೆಲೆ ಕೊಡುತ್ತಿಲ್ಲ. ಹೀಗಾಗಿ ಅಂತವರನ್ನು ಬೇರೆಡೆ ವರ್ಗಾಯಿಸುವುದು ಸೂಕ್ತ. ವಿದ್ಯುತ್ ಪರಿವರ್ತಕಗಳು ಸುಟ್ಟುಹೋದ ವೇಳೆ ಅಧಿಕಾರಿಗಳು ತ್ವರಿತವಾಗಿ ಸ್ಪಂದಿಸುತ್ತಿಲ್ಲ. ವಿನಾಕಾರಣ ವಿಳಂಬ ಮಾಡುತ್ತಾರೆ ಎಂದು ದೂರಿದರು.
ಹೊಸ ನೇಮಕಾತಿ ಪ್ರಕ್ರಿಯೆ ವೇಳೆ ಹಲವು ವರ್ಷಗಳಿಂದ ಒಂದೇ ಕಡೆ ಕೆಲಸ ಮಾಡುತ್ತಿರುವವರನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಇನ್ನೂ ಟಿಸಿಗಳ ಬದಲಾವಣೆ ಸಂಬಂಧ ಈಗಾಗಲೇ ಕೃಷಿ ಪಂಪ್‌ಸೆಟ್‌ಗಳ ಅಕ್ರಮ-ಸಕ್ರಮ ಕಾರ್ಯ ಪ್ರಗತಿಯಲ್ಲಿದ್ದು, ಪೂರ್ಣವಾದ ಬಳಿಕ, ವಿದ್ಯುತ್ ಪೂರೈಕೆ ಸಾಮರ್ಥ್ಯ ಸಮರ್ಪಕಗೊಂಡು, ಟಿಸಿಗಳು ಸುಟ್ಟುಹೋಗುವುದು ನಿಯಂತ್ರಣಕ್ಕೆ ಬರಲಿದೆ ಎಂದು ಮಾಹಿತಿ ನೀಡಿದರು.
ಚಿಕ್ಕಜಾಜೂರು, ಸಾಸಲು ಗ್ರಾಮದಲ್ಲಿ ಕೆಪಿಟಿಸಿಎಲ್‌ನಿಂದ ಉಪಕೇಂದ್ರಗಳ ಕಾಮಗಾರಿ ಪೂರ್ಣಗೊಂಡಿದೆ. ಆದರೂ, ಚಿತ್ರದುರ್ಗ ವಿಭಾಗ ಬೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ಕೆಪಿಟಿಸಿಎಲ್ ಅಧಿಕಾರಿಗಳೊಂದಿಗೆ ಸಮನ್ವಯ ಮಾಡದೆ, ನಿರ್ಲಕ್ಷ್ಯ ತೋರಿದ್ದಾರೆ. 7 ತಾಸು ವಿದ್ಯುತ್ ಪೂರೈಸಲು ಅವಕಾಶವಿದ್ದರೂ ಕ್ರಮಕ್ಕೆ ಮುಂದಾಗಿಲ್ಲ ಎಂದು ಸಚಿವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಚಿತ್ರದುರ್ಗ ವಿಭಾಗದಲ್ಲಿ ಸಂಬಂಧಿಸಿದ ಅಧಿಕಾರಿಗಳು ದೂರುಗಳಿಗೆ ಸ್ಪಂದಿಸುತ್ತಿಲ್ಲ. ಕರೆ ಸ್ವೀಕರಿಸದೆ, ಮೊಬೈಲ್ ಸ್ವಿಚ್ ಆಫ್ ಮಾಡಿಬಿಡುತ್ತಾರೆ. ಇದರಿಂದ ಸಮಸ್ಯೆಗಳು ಪರಿಹಾರವಾಗದೆ ಜನರು ಜಿಲ್ಲಾಡಳಿತಕ್ಕೆ ದೂರು ನೀಡುತ್ತಿದ್ದಾರೆಂದು ಡಿಸಿ ಟಿ.ವೆಂಕಟೇಶ್ ಸಚಿವರ ಗಮನಕ್ಕೆ ತಂದರು. ಇದು ಪುನರಾವರ್ತನೆ ಆದಲ್ಲಿ ಕೂಡಲೇ ವರ್ಗಾವಣೆಗೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಹೊಸ ಬೆಸ್ಕಾಂ ವಿಭಾಗಕ್ಕೆ ಒತ್ತಾಯ: ಚಳ್ಳಕೆರೆ, ಮೊಳಕಾಲ್ಮೂರು ತಾಲೂಕು ಹಿರಿಯೂರು ಬೆಸ್ಕಾಂ ವಿಭಾಗ ವ್ಯಾಪ್ತಿಗೆ ಸೇರಿದೆ. ಇದರಿಂದ ರೈತರಿಗೆ ಅನಾನುಕೂಲವಾಗುತ್ತಿದೆ. ಹಾಗಾಗಿ ಚಳ್ಳಕೆರೆ ತಾಲೂಕಿನಲ್ಲಿ ನೂತನ ವಿಭಾಗ ಸ್ಥಾಪನೆಗೆ ಅಗತ್ಯ ಕ್ರಮವಹಿಸಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಒತ್ತಾಯಿಸಿದರು.
ಜೊತೆಗೆ ಚಳ್ಳಕೆರೆಯಲ್ಲಿ ರಿಲೇ ಟೆಸ್ಟಿಂಗ್ ಸ್ಟೇಷನ್ ಸ್ಥಾಪನೆ, ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೆಡ್ಡಿಹಳ್ಳಿ, ಅಜ್ಜನಗುಡಿ, ತುರುವನೂರು ಹೋಬಳಿ ಬೆಳಗಟ್ಟದಲ್ಲಿ ಹೊಸದಾಗಿ ಉಪಕೇಂದ್ರ ಮಂಜೂರು ಮಾಡುವಂತೆ ಜಾರ್ಜ್ ಅವರಿಗೆ ಮನವಿ ಮಾಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ರಾಜ್ಯ ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಬಿ.ಯೋಗೇಶ್ ಬಾಬು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‌ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಆರ್.ಶಿವಣ್ಣ, ಉಪಾಧ್ಯಕ್ಷ ಡಿ.ಎನ್.ಮೈಲಾರಪ್ಪ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಶಿವಶಂಕರ್, ಜಿಪಂ ಸಿಇಒ ಎಸ.ಜೆ.ಸೋಮಶೇಖರ್, ಎಡಿಸಿ ಬಿ.ಟಿ.ಕುಮಾರಸ್ವಾಮಿ ಇತರರಿದ್ದರು.