ಜಿಲ್ಲೆ

ಕೃಷಿ ನೀತಿಗಳ ಪರ ಬಹಿರಂಗ ಚರ್ಚೆಗೆ ಸರ್ಕಾರ ಸಿದ್ಧ

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರವು ರೈತರ ಹಿತರಕ್ಷಣೆಗಾಗಿ ತಂದಿರುವ ನೀತಿಗಳ ಪರ ಬಹಿರಂಗ ಚರ್ಚೆ ನಡೆಸಲು ಸಿದ್ಧವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ.ಸುಧಾಕರ್ ತಿಳಿಸಿದರು.

ನಗರದ ಪಿಎಲ್‌ಡಿ ಬ್ಯಾಂಕ್ ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿದರು.

ಪ್ರಧಾನಿ ಮೋದಿ ಎಂದಿಗೂ ಜನ ವಿರೋಧಿ ನೀತಿಗಳನ್ನು ಜಾರಿಗೆ ತರುವುದಿಲ್ಲ. ಬಡ ಮತ್ತು ಮಧ್ಯಮ ವರ್ಗದವರ ಹಿತ ಕಾಪಾಡುವಲ್ಲಿ, ಅದರಲ್ಲೂ ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕೆ ಬದ್ಧರಾಗಿದ್ದಾರೆ. ಆದರೆ, ಕೆಲವರು ರಾಜಕಾರಣಕ್ಕಾಗಿ ಜನಪರ ಧೋರಣೆಯನ್ನು ತಪ್ಪಾಗಿ ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಕೆಲ ಸಂಘಟನೆಗಳು ಆಮಿಷಕ್ಕೊಳಗಾಗಿ ಪ್ರತಿಭಟನೆ ನಡೆಸುತ್ತಿವೆ. ಇದಕ್ಕೆ ರೈತರು ಹೆಚ್ಚಿನ ಬೆಂಬಲ ವ್ಯಕ್ತಪಡಿಸಿಲ್ಲ ಎಂದರು.

ಕೃಷಿ ಮಸೂದೆಗಳಿಂದ ಆಗಲಿರುವ ತೊಂದರೆಗಳೇನು ಎಂಬುದರ ಬಗ್ಗೆ ಯಾರೂ ಹೇಳುತ್ತಿಲ್ಲ. ಬದಲಿಗೆ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ರೈತರು ಅವರ ಬೆಳೆಗಳನ್ನು ಬೇಕಾದ ಕಡೆ ಮಾರಲು ಅವಕಾಶ ಒದಗಿಸುವುದರಲ್ಲಿ ತಪ್ಪಿಲ್ಲ. ಭೂ ಸುಧಾರಣೆ ಕಾಯ್ದೆಗೂ ವಿರೋಧ ವ್ಯಕ್ತವಾಗಲು ಆಮಿಷವೇ ಕಾರಣ. ಇದರಿಂದ ಪ್ರತಿಪಕ್ಷಗಳ ವಿರೋಧಿ ಧೋರಣೆಗೆ ಕಿವಿಗೊಡಬಾರದು ಎಂದು ತಿಳಿಸಿದರು.

ರಾಜ್ಯ ಮಾವು ಮತ್ತು ಮಾರುಕಟ್ಟೆ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಸಹಕಾರಿ ಕ್ಷೇತ್ರ ರೈತರ ಸರ್ವಾಂಗೀಣ ಅಭಿವೃದ್ಧಿಗೆ ಸಹಕಾರಿಯಾಗಿದೆ. ತಾಲೂಕಿನಲ್ಲಿ ಸಣ್ಣ ಮತ್ತು ಅತಿ ಸಣ್ಣ ರೈತರು ಹೂವು ಹಣ್ಣು, ತರಕಾರಿಗಳನ್ನು ಬೆಳೆಯುವುದರಲ್ಲಿ, ಹೈನುಗಾರಿಕೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಇದಕ್ಕೆ ಬ್ಯಾಂಕು ಬೆನ್ನೆಲುಬಾಗಿ ನಿಂತು ಮತ್ತಷ್ಟು ಪ್ರಗತಿಗೆ ಶ್ರಮಿಸಬೇಕು ಎಂದರು.

ಸಂಪುಟ ಸಭೆಯಲ್ಲಿ ಒತ್ತಾಯ: ಎತ್ತಿನಹೊಳೆ ಯೋಜನೆಗೆ ಹೆಚ್ಚಿನ ಅನುದಾನ ಮೀಸಲಿಡಲು ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ. ಜತೆಗೆ ಕೃಷ್ಣಾ ನದಿಯ ನೀರಿನ ಪಾಲು ಪಡೆಯುವ ನಿಟ್ಟಿನಲ್ಲಿ ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೂ ಚರ್ಚಿಸಲಾಗಿದೆ. ನೀರಾವರಿ ಯೋಜನೆಗಳ ಮೂಲಕ ಈ ಭಾಗದ ಕೆರೆಗಳನ್ನು ತುಂಬಿಸುವುದರ ಜತೆಗೆ ಬೃಹತ್ ಕೈಗಾರಿಕೆಗಳ ಸ್ಥಾಪನೆಯೊಂದಿಗೆ ಉದ್ಯೋಗಾವಕಾಶ ಒದಗಿಸಿಕೊಡಲಾಗುತ್ತದೆ ಎಂದು ಸಚಿವರು ತಿಳಿಸಿದರು.

1.66 ಕೋಟಿ ರೂ. ಷೇರು: ಪಿಎಲ್‌ಡಿ ಬ್ಯಾಂಕ್ 1.66 ಕೋಟಿ ರೂ. ಷೇರು ಬಂಡವಾಳ ಹೊಂದಿದೆ. 2019-20 ನೇ ಸಾಲಿನಲ್ಲಿ 39.20 ಲಕ್ಷ ರೂ. ಲಾಭ ಬಂದಿದೆ ಎಂದು ಬ್ಯಾಂಕ್ ಅಧ್ಯಕ್ಷ ಪಿ.ನಾಗೇಶ್ ತಿಳಿಸಿದರು. ಬ್ಯಾಂಕಿನಲ್ಲಿ ಎ ವರ್ಗದ 3953 ಸದಸ್ಯರು ಮತ್ತು ಬಿ ವರ್ಗದ 3872 ಸದಸ್ಯರಿದ್ದಾರೆ. ಬ್ಯಾಂಕಿನ ನಿಧಿಗಳು 3.81 ಕೋಟಿ ರೂ. ಮತ್ತು ವಿವಿಧ ಸಂಸ್ಥೆಗಳಲ್ಲಿ ಹೂಡಿರುವ ಠೇವಣಿ 1.49 ಕೋಟಿ ರೂ. ಇದೆ. 16.19 ಕೋಟಿ ಸಾಲ ವಿತರಿಸಿದ್ದು, ಕೇಂದ್ರ ಬ್ಯಾಂಕಿಗೆ 13.92 ಕೋಟಿ ರೂ. ಮರುಪಾವತಿಸಬೇಕಿದೆ. 2020 ನೇ ಸಾಲಿನ ಮಾರ್ಚ್ ಅಂತ್ಯಕ್ಕೆ 7 ಕೋಟಿ ರೂ. ತಗಾದೆ ಸಾಲ ಪೈಕಿ 4.20 ಕೋಟಿ ರೂ. ವಸೂಲಿಯಾಗಿದೆ. 2.85 ಕೋಟಿ ರೂ. ಬಾಕಿ ಇದೆ. ಈ ಸಾಲಿನಲ್ಲಿ 5.56 ಲಕ್ಷ ರೂ. ಬ್ಯಾಂಕಿನ ನಿವ್ವಳ ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಜಿಪಂ ಸದಸ್ಯ ಪಿ.ಎನ್.ಕೇಶವರೆಡ್ಡಿ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ತಿರುಮಳಪ್ಪ, ನಿರ್ದೇಶಕರಾದ ಬಿ.ಎನ್.ಮುನಿಯಪ್ಪ, ಬಿ.ಎನ್.ಮಂಜುಳಮ್ಮ, ಎನ್.ನಾರಾಯಣಸ್ವಾಮಿ, ಮುನಿಶಾಮಿ, ವಿ.ಆನಂದಮೂರ್ತಿ, ಸಾವಿತ್ರಮ್ಮ, ಎನ್.ಪ್ರಸಾದ್, ವೈ.ಮಂಜುನಾಥ್, ಕೆ.ಕಾಳೇಗೌಡ, ಬಿ.ಎಚ್.ಮೊಹಮ್ಮದ್ ದಾವೂದ್, ಪಿ.ಲವಣ್ಣ, ವ್ಯವಸ್ಥಾಪಕ ಎ.ಗೋಪಾಲಕೃಷ್ಣ ಮತ್ತಿತರರು ಇದ್ದರು.