ಬಳ್ಳಾರಿ : ತಾಲೂಕಿನ ಸೋಮಸಮುದ್ರ ಹಾಗೂ ವಿವಿಧ ಗ್ರಾಮಗಳಲ್ಲಿ ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣಾ ಸಂಶೋಧನಾ ಕೇಂದ್ರದ ವತಿಯಿಂದ ಎರಡು ದಿನಗಳ ಕೃಷಿ-ಡ್ರೋನ್ ತಂತ್ರಜ್ಞಾನ ಪ್ರಾತ್ಯಕ್ಷಿಕೆಯನ್ನು ಇತ್ತೀಚೆಗೆ ಅಯೋಜಿಸಲಾಯಿತು.
ಐಸಿಎಆರ್‌ನ ಹಿರಿಯ ವಿಜ್ಞಾನಿ ಡಾ. ಎಂ. ಎನ್. ರಮೇಶ ಮಾತನಾಡಿ, ಡ್ರೋನ್ ಬೆಳೆಗಳಿಗೆ ರಾಸಾಯನಿಕಗಳನ್ನು ಅನ್ವಯಿಸಲು ಬೇಕಾಗುವ ಕಾರ್ಮಿಕರನ್ನು ಕಡಿಮೆ ಮಾಡುತ್ತದೆ. ಕೇಂದ್ರೀಕೃತವಾಗಿ ಮತ್ತು ನಿಖರವಾಗಿ ರಾಸಾಯನಿಕವನ್ನು ಯಂತ್ರದ ಮೂಲಕ ಅನ್ವಯಿಸುವುದರಿಂದ, ಮಾನವನ-ಚರ್ಮದ ಅಲರ್ಜಿ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವುದರ ಜತೆಗೆ ಮತ್ತು ರಸಾಯನಿಕಗಳ ಅನ್ವಯಿಕತೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸುತ್ತದೆ ಎಂದರು.
ಬಳಿಕ ಮೆಣಸಿನಕಾಯಿ, ಭತ್ತ ಮತ್ತು ಮೆಕ್ಕೆಜೋಳ ಬೆಳೆಗಳ ಮೇಲೆ ಕೃಷಿ ಡ್ರೋನ್ ಮೂಲಕ ಸಿಂಪರಣೆ ಪ್ರಾತ್ಯಕ್ಷಿಕೆಯನ್ನು 20 ಎಕರೆ ಭೂಪ್ರದೇಶದಲ್ಲಿ ನಡೆಸಲಾಯಿತು.
ಸೋಮಸಮುದ್ರ, ಲಕ್ಷ್ಮೀನಗರ ಕ್ಯಾಂಪ್, ಕೋಳೂರು, ಮದಿರೆ, ಕೃಷ್ಣಾನಗರ ಕ್ಯಾಂಪ್, ಭಾಗ್ಯನಗರ ಕ್ಯಾಂಪ್, ಶ್ರೀಧರಗಡ್ಡ ಗ್ರಾಮಗಳ ಸುಮಾರು 49 ರೈತರು ಮತ್ತು ಅನೇಕ ದಾರಿಹೋಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಐಸಿಎಆರ್ ಸಂಸ್ಥೆಯ 100 ದಿನಗಳ ಗುರಿಯಡಿ ಈ ಪ್ರದೇಶದ ರೈತರ ಹೊಲಗಳಲ್ಲಿ ತಂತ್ರಜ್ಞಾನದ ಪ್ರಾತ್ಯಕ್ಷಿಕೆಯ ಪ್ರದರ್ಶನವನ್ನು ನಡೆಸಲಾಯಿತು.