ಮೂಡಿಗೆರೆ: ವಕ್ಫ್ ಮಂಡಳಿ ಹೆಸರಿನಲ್ಲಿ ರೈತರ ಜಮೀನು ಕಬಳಿಸಲು ರಾಜ್ಯ ಸರ್ಕಾರ ಹೊರಟಿದ್ದನ್ನು ಬಿಜೆಪಿ ಸಹಿಸುವುದಿಲ್ಲ. ರೈತರಿಗೆ ಅನ್ಯಾಯವಾಗಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಹೇಳಿದರು.
ತಾಲೂಕು ಕಚೇರಿ ಎದುರು ಬಿಜೆಪಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲೆಯ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದು ಕಂಡುಬಂದಿದೆ. ಸಾಮರಸ್ಯದಿಂದ ಬಾಳುತ್ತಿದ್ದ ಹಿಂದು-ಮುಸ್ಲಿಮರ ನಡುವೆ ಘರ್ಷಣೆ ಉಂಟುಮಾಡುವ ವಾತಾವರಣವನ್ನು ರಾಜ್ಯ ಸರ್ಕಾರ ನಿರ್ಮಾಣ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನರೇಂದ್ರ ಮಾತನಾಡಿ, ವಕ್ಫ್ ಮಂಡಳಿಯಿಂದ ಆಗಿರುವ ಅಕ್ರಮವನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರು ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆ ಮಂಡಿಸಿದ್ದಾರೆ. ಈ ತಿದ್ದುಪಡಿ ಜಾರಿಯಾಗುವುದು ಖಚಿತವಾಗುತ್ತಿದ್ದಂತೆ ವಕ್ಫ್ ಮಂಡಳಿ ಇಡೀ ದೇಶದಲ್ಲಿ ಸಾರ್ವಜನಿಕ ಆಸ್ತಿ ಕಬಳಿಸುವ ಹುನ್ನಾರಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಟಿ.ಎಂ.ಗಜೇಂದ್ರ, ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ.ದಿನೇಶ್, ಮುಖಂಡರಾದ ಎಂ.ಆರ್.ಜಗದೀಶ್, ಕೆ.ಆರ್.ಕೇಶವ, ಜೆ.ಎಸ್.ರಘು, ಹಳಸೆ ಶಿವಣ್ಣ, ನಯನ ತಳವಾರ, ಪ್ರಶಾಂತ್, ಮನೋಜ್, ಫ್ರಾನ್ಸಿಸ್, ಅಮಿತಾ ಮುತ್ತಪ್ಪ, ಸರೋಜ ಸುರೇಂದ್ರ, ಪಂಚಾಕ್ಷರಿ, ಎಂ.ಎಸ್.ಸುಜಿತ್, ತಾರೇಶ್, ಪರೀಕ್ಷಿತ್ ಜಾವಳಿ, ರವಿ ಒಡೆಯರ್ ಇತರರಿದ್ದರು.