ಬೀದರ್: ಕೃಷಿ ಜತೆಗೆ ಪ್ರತಿಯೊಬ್ಬರ ರೈತರು ಹೈನುಗಾರಿಕೆ ಅಳವಡಿಸಿಕೊಂಡರೆ ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭವೇ ಬರುವುದಿಲ್ಲ ಎಂದು ಕಲಬುರಗಿ-ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟ ನಿರ್ದೇಶಕ ಮಲ್ಲಿಕಾರ್ಜುನ ಬಿರಾದಾರ ಹೇಳಿದರು.
ಸಹಕಾರ ಸಪ್ತಾಹದ 4ನೇ ದಿನವಾದ ಮಂಗಳವಾರ ತಾಲೂಕಿನ ಕಪಲಾಪುರದಲ್ಲಿ ಜರುಗಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತರು ಹೈನುಗಾರಿಕೆಯಲ್ಲಿ ತೊಡಗುವ ಮೂಲಕ ತಮ್ಮ ಆರ್ಥಿಕ ಸ್ಥಿತಿ ಸುಧಾರಿಸಿಕೊಳ್ಳಬೇಕು. ಸಹಕಾರ ದಿಗ್ಗಜ ದಿ. ಡಾ.ಗುರುಪಾದಪ್ಪ ನಾಗಮಾರಪಳ್ಳಿ ಅವರು ಜಿಲ್ಲೆಗೆ ನೀಡಿದ ಕೊಡುಗೆ ಅಪಾರ ಎಂದರು.
ಜಿಲ್ಲಾ ಸಹಕಾರ ಒಕ್ಕೂಟ ನಿರ್ದೇಶಕ ಮಹ್ಮದ್ ಸಲಿಮುದ್ದೀನ್ ಮಾತನಾಡಿ, ಸಹಕಾರ ಕ್ಷೇತ್ರ ಬಹಳ ವಿಶಾಲವಾಗಿದೆ. ಹೈನುಗಾರಿಕೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸುವ ಕೆಲಸ ಸಹಕಾರ ಬ್ಯಾಂಕ್ ಗಳು ಮಾಡುತ್ತಿವೆ ಎಂದು ಹೇಳಿದರು.
ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ಬಂಡೆಪ್ಪ ಬಿರಾದಾರ ಮಾತನಾಡಿದರು. ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷೆ ಭಾರತಬಾಯಿ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಹಾಲು ಒಕ್ಕೂಟದ ನಿರ್ದೇಶಕ ಭೀಮರಾವ ಬಳತೆ, ಡಾ.ವಿನೋದ ನಾಯಕ, ಶಿವರಾಜ ಪಾಟೀಲ್, ಶಿವರಾಜ ಮೂಲಗೆ, ಹಣಮಂತ ಮೈಲಾರೆ ಇದ್ದರು. ರೇಖಾ ಗಾಯಕವಾಡ ನಿರೂಪಣೆ ಮಾಡಿ ವಂದಿಸಿದರು. ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಮತ್ತು ಹಾಲು ಉತ್ಪಾದಕರ ಸಹಕಾರ ಸಂಘ ಕಪಲಾಪುರ ವತಿಯಿಂದ ಕಾರ್ಯಕ್ರಮ ಸಂಘಟಿಸಲಾಗಿತ್ತು.