ಜಿಲ್ಲೆ

ಕೃಷಿ ಚಟುವಟಿಕೆಗೆ ತೊಂದರೆಯಾಗದಂತೆ ಕ್ರಮವಹಿಸಿ:ಡಾ.ಎಂ ಎನ್.ಅಜಯ್ ನಾಗಭೂಷಣ್

ಹಾಸನ: ಜಿಲ್ಲೆಯಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗಿದ್ದು, ರೈತರ ಕೃಷಿ ಚಟುವಟಿಕೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಗತ್ಯ ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಕ್ರಮವಹಿಸುವಂತೆ ಪಶು ಸಂಗೋಪನೆ, ಮೀನುಗಾರಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಕಾರ್ಯದರ್ಶಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾ ಪಂಚಾಯಿತಿ ಆಡಳಿತಾಧಿಕಾರಿ ಡಾ.ಎಂ ಎನ್.ಅಜಯ್ ನಾಗಭೂಷಣ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಭಾನುವಾರ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕಗಳ ದಾಸ್ತಾನು ಇರುವಂತೆ ನೋಡಿಕೊಳ್ಳಿ, ತೋಟಗಾರಿಕೆ ಬೆಳೆಗಳಿಂದ ಉತ್ಪಾದನೆ ಹೆಚ್ಚಳಕ್ಕೆ ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅಧ್ಯಯನ ಮಾಡಿ ಫೀಡ್ ಬ್ಯಾಕ್ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರದ ಎಲ್ಲಾ ಯೋಜನೆಗಳನ್ನು ಸರಿಯಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಎಚ್ಚರವಹಿಸಬೇಕು. ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ವಿತರಣೆ ಹಾಗೂ ಗುಣಮಟ್ಟದ ಶೂ ಮತ್ತು ಸಾಕ್ಸ್ ವಿತರಣೆಗೆ ಗಮನಹರಿಸಿ ಎಂದರಲ್ಲದೆ ಯಾವುದೇ ದೂರುಗಳು ಬರದಂತೆ ನಿಗಾ ವಹಿಸಬೇಕು ಎಂದು ಹೇಳಿದರು.
ಶಾಲಾ ಮಕ್ಕಳಿಗೆ ಬಿಸಿಯೂಟ ತಯಾರಿಕೆಯಲ್ಲಿ ನಿಗಧಿತ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಬಳಕೆ ಮಾಡಲಾಗುತ್ತಿದೆಯೇ ಎಂಬುದನ್ನು ಅರಿಯಲು ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡ, ತಾಯಿ ಮತ್ತು ಶಿಶು ಮರಣ ಸಂಖ್ಯೆ ಕಡಿಮೆ ಮಾಡಲು ಕ್ರಮವಹಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ತಿಳಿಸಿದರಲ್ಲದೆ, ಆರೋಗ್ಯ ಕಾರ್ಯಕ್ರಮಗಳನ್ನು ಜನತೆ ಸದ್ಬಳಕೆ ಮಾಡಿಕೊಳ್ಳಲು ಅರಿವು ಮೂಡಿಸಿ ಎಂದು ತಿಳಿಸಿದರು.
ಹಾಸ್ಟೆಲ್‌ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಆಹಾರದ ಗುಣಮಟ್ಟ ಹಾಗೂ ನಿಗಧಿತ ಪ್ರಮಾಣದಲ್ಲಿ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡುವಂತೆ ನಿರ್ದೇಶನ ನೀಡಿದರು.ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯ ವಿವಿಧ ಯೋಜನೆಗಳನ್ನು ಸೇರಿದಂತೆ ಒಂದು ಕಾರ್ಯಕ್ರಮವನ್ನು ಆಗಸ್ಟ್ ಅಥವಾ ನವೆಂಬರ್ ತಿಂಗಳಲ್ಲಿ ಆಯೋಜನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಅಂಗನವಾಡಿಗಳಲ್ಲಿ ಮಕ್ಕಳ ಹಾಜರಾತಿ, ಆಹಾರದ ಗುಣಮಟ್ಟ ಹಾಗೂ ನಿಗಧಿತ ಪ್ರಮಾಣದಲ್ಲಿ ಆಹಾರ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ಮಾಡ, ಗೃಹ ಲಕ್ಷ್ಮೋ ಯೋಜನೆಯಡಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪ್ರತಿ ಮಾಹೆ ಎರಡು ಸಾವಿರ ರೂಗಳು ಜಮಾ ಆಗುತ್ತಿದೆ. ಜಿಲ್ಲೆಯಲ್ಲಿ ಈ ಯೋಜನೆಗೆ ಸೇರ್ಪಡೆಯಾಗದೆ ಉಳಿದಿರುವವರ ಕುರಿತು ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶದ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನು ತಡೆಗಟ್ಟಲು ನಿಗಾವಹಿಸಬೇಕು.ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಒತ್ತು ನೀಡಬೇಕು.ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ ಯಶಸ್ಸು ಸಾಧಿಸಿರುವ ಬಗ್ಗೆ ಯಶೋಗಾಥೆಗಳನ್ನು ಮಾಡಿ ಅಭಿವೃದ್ಧಿ ಪಥದಲ್ಲಿ ಸಾಗಲು ಜನರಿಗೆ ಪ್ರೇರಣೆ ಆಗುತ್ತದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಿ ಸಂರಕ್ಷಣೆ ಮಾಡಿರುವ 24 ಬಾಲಕಾರ್ಮಿಕರಲ್ಲಿ ಸ್ಥಳೀಯ 11 ಬಾಲಕಾರ್ಮಿಕರು ಶಾಲೆಗೆ ಹೋಗಲು ಏನು ತೊಂದರೆಯಾಗಿದೆ ಎನ್ನುವುದನ್ನು ಅರಿಯಲು ಅವರ ಮನೆಗೆ ಭೇಟಿ ನೀಡಿ ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರಲ್ಲದೆ, ಇತರೆ ರಾಜ್ಯಗಳಿಂದ ಜಿಲ್ಲೆಗೆ ವಲಸೆ ಬಂದಿರುವ ಕುಟುಂಬಗಳಿಗೆ ಸೇರಿದ 13 ಬಾಲಕಾರ್ಮಿಕರ ಬಗ್ಗೆ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಪತ್ರ ಬರೆಯಲು ಕಾರ್ಮಿಕ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆರ್. ಪೂರ್ಣಿಮಾ, ಅಪರ ಜಿಲ್ಲಾಧಿಕಾರಿ ಕೆ ಟಿ.ಶಾಂತಲಾ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್,ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.