ತಿ.ನರಸೀಪುರ: ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಿಸಿಕೊಡುವಂತೆ ಶಾಸಕ ಎಂ.ಅಶ್ವಿನ್‌ಕುಮಾರ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ತಾಲೂಕಿನ ಕುರುಬೂರು ಗ್ರಾಮದಲ್ಲಿ ನೀರಾವರಿ ಇಲಾಖೆಯಿಂದ 2 ಕೋಟಿ ರೂ. ವೆಚ್ಚದಲ್ಲಿ ಸರ್ವೀಸ್ ರಸ್ತೆ ಹಾಗೂ ಕುರುಬೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ನಾಲಾ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಗುತ್ತಿಗೆದಾರರು ಗುಣಮಟ್ಟದ ರಸ್ತೆ ಮಾಡುವ ಮೂಲಕ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸಿಕೊಡಬೇಕು. ಸಣ್ಣ ಪುಟ್ಟ ಸಮಸ್ಯೆಗಳಿದ್ದಲ್ಲಿ ಗ್ರಾಮಸ್ಥರ ಸಮ್ಮುಖದಲ್ಲಿ ಬಗೆಹರಿಸಿ ಯಾರಿಗೂ ತೊಂದರೆಯಾಗದ ರೀತಿ ರಸ್ತೆ ನಿರ್ಮಾಣ ಮಾಡಬೇಕು ಎಂದು ಸೂಚಿಸಿದರು.
ಕೃಷಿ ಚಟುವಟಿಕೆಗಳಿಗೆ ಟ್ರ್ಯಾಕ್ಟರ್, ಟಿಲ್ಲರ್, ಭತ್ತ ಕಟಾವು ಯಂತ್ರ ಹಾಗೂ ಎತ್ತಿನ ಗಾಡಿ ಸಾಗಿಸಲು ನಾಲಾ ರಸ್ತೆ ರೈತನಿಗೆ ಅತ್ಯವಶ್ಯಕವಾಗಿದೆ. ಸರ್ಕಾರ ಹೆಚ್ಚಿನ ಅನುದಾನ ನೀಡದಿದ್ದರೂ ರೈತರ ಸಮಸ್ಯೆ ಕುರಿತಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ವಿಶೇಷ ಅನುದಾನ ತಂದು ಉತ್ತಮ ರಸ್ತೆ ಕಲ್ಪಿಸಲು ಪ್ರಯತ್ನಿಸಿದ್ದೇನೆ. ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಅನುದಾನ ತಂದು ರೈತರ ಹಿತ ಕಾಯಲು ಬದ್ಧನಾಗಿದ್ದೇನೆ ಎಂದು ತಿಳಿಸಿದರು.
ಕುರುಬೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ಸಿ.ವೀರೇಶ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್.ಸೋಮಣ್ಣ, ಜೈಪಾಲ್ ಭರಣಿ, ಶಿವಕುಮಾರ್, ಮಹಾದೇವ್, ಮಾವಿನಹಳ್ಳಿ ರಾಜೇಶ್, ಬೇವಿನಹಳ್ಳಿ ಸತೀಶ್, ಜಗದೀಶ್, ಶಿವಮೂರ್ತಿ, ಕುರುಬೂರು ನಂದೀಶ್ ಇತರರು ಇದ್ದರು.