ಜಿಲ್ಲೆ

ಕೃಷಿ ಚಟುವಟಿಕೆ ನಡೆಸಲು ಯಾವುದೇ ಅಡೆತಡೆಯಾಗದಿರಲಿ

ನವಲಗುಂದ/ಅಣ್ಣಿಗೇರಿ: ಕೃಷಿ ಚಟುವಟಿಕೆಗೆ ಯಾವುದೇ ಅಡೆತಡೆಯಾಗದಂತೆ ನೋಡಿಕೊಳ್ಳ ಬೇಕು ಎಂದು ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಕರೊನಾ ಸೋಂಕು ಇಲ್ಲದಿರುವ ಪ್ರದೇಶದಲ್ಲಿ ಜಿಲ್ಲಾಡಳಿತ ಲಾಕ್​ಡೌನ್ ಸಡಿಲಿಕೆಗೊಳಿಸಿದ ಹಿನ್ನೆಲೆಯಲ್ಲಿ ನವಲಗುಂದ ಹಾಗೂ ಅಣ್ಣಿಗೇರಿಯಲ್ಲಿ ಏರ್ಪಡಿಸಿದ್ದ ವರ್ತಕರ, ಸಾರ್ವಜನಿಕರ, ರೈತರ ಹಾಗೂ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಸೂಚನೆಯಂತೆ ತಾಲೂಕಿನಲ್ಲಿ ಸಡಿಲಿಕೆ ಕೈಗೊಳ್ಳಲು ಮುಂದಾಗಿದ್ದೇವೆ. ಇನ್ನು ಕೃಷಿ ಉತ್ಪನ್ನ ಸಂಬಂಧಿಸಿದಂತೆ ಮುಂಗಾರು ಬಿತ್ತನೆಗಾಗಿ ರೈತರಿಗೆ ಅಗತ್ಯಕ್ಕೆ ಅನುಗುಣವಾಗಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬೀಜ, ಗೊಬ್ಬರ ಸಂಗ್ರಹಿಸಿಟ್ಟುಕೊಳ್ಳಲಾಗಿದೆ. ರೈತರು ಯಾವುದೇ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಸೋಮವಾರದಿಂದ ಗುರುವಾರದವರೆಗೆ ವಾರದಲ್ಲಿ ನಾಲ್ಕು ದಿನ ಬೆಳಗ್ಗೆ 10ರಿಂದ ಸಾಯಂಕಾಲ 6ರ ವರೆಗೆ ವ್ಯಾಪಾರ ನಡೆಸಬಹುದು ಎಂದರು.

ಕರೊನಾ ಜಗತ್ತಿಗೆ ವ್ಯಾಪಿಸಿದೆ. ಈ ರೋಗಕ್ಕೆ ಔಷಧ ಇಲ್ಲ. ಹೀಗಾಗಿ ಕೋವಿಡ್-19 ನಿಯಂತ್ರಣಕ್ಕೆ ಎಲ್ಲರೂ ಸಹಕಾರ ನೀಡಬೇಕು. ದೇವರ ಪುಣ್ಯದಿಂದ ನವಲಗುಂದ ತಾಲೂಕಿನಲ್ಲಿ ದೆಹಲಿ ತಬ್ಲಿಘಿಗೆ ತೆರಳಿದ 24 ಕರೊನಾ ಶಂಕಿತರ ತಪಾಸಣೆ ವರದಿ ನೆಗೆಟಿವ್ ಬಂದಿದೆ ಎಂದು ತಿಳಿಸಿದರು.

ಡಿಎಸ್​ಪಿ ರವಿ ನಾಯ್ಕ ಮಾತನಾಡಿ, ಲೈಸೆನ್ಸ್ ಹೊಂದಿವರು ಮಾತ್ರ ವಾಣಿಜ್ಯ ಸಂಕೀರ್ಣದಲ್ಲಿ ವ್ಯಾಪಾರ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರ ನಿಗದಿಪಡಿಸಿದ ಅಂಗಡಿಕಾರರು ಮಾತ್ರ ಅಂಗಡಿಗಳನ್ನು ತೆರೆಯಬೇಕು. ಸಡಿಲಿಕೆ ವೇಳೆ ಅವಶ್ಯಕತೆ ಇದ್ದವರು ಬೈಕ್, ವಾಹನ ಸಂಚಾರ ಕೈಗೊಳ್ಳಬಹುದು. ಆದರೆ, ಅನವಶ್ಯಕವಾಗಿ ಓಡಾಡುವವರ ಮೇಲೆ ಕಾನೂನಿನ ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಎನ್.ಎಚ್. ಖುದಾವಂದ, ಲೋಕನಾಥ ಹೆಬಸೂರ, ಆರ್. ಎನ್. ಧಾರವಾಡ, ಶ್ರೀಕಾಂತ ಪಾಟೀಲ, ಎನ್.ಪಿ. ಕುಲಕರ್ಣಿ, ಅಜೀತ ಆನೇಗುಂದಿ, ಕೊಟ್ರೇಶ ಬ್ಯಾಳಿ, ತಹಸೀಲ್ದಾರ್, ನವೀನ ಹುಲ್ಲೂರ, ಬಿಇಒ ಗಿರೀಶ ಪದಕಿ, ಸಿಪಿಐ ಸಿ.ಜಿ. ಹಿರೇಮಠ, ಪಿಎಸ್​ಐ ಜಯಪಾಲ ಪಾಟೀಲ, ಗುರು ಇಂಗಳಹಳ್ಳಿ, ಇತರರು ಇದ್ದರು.

ಅಣ್ಣಿಗೇರಿಯಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ತಹಸೀಲ್ದಾರ್ ಕೊಟ್ರೇಶ್ವರ, ಷಣ್ಮುಖ ಗುರಿಕಾರ, ಪುರಸಭೆ ಮುಖ್ಯಾಧಿಕಾರಿ ಕೆ.ಎಫ್. ಕಟಗಿ, ಎಪಿಎಂಸಿ ಅಧ್ಯಕ್ಷ ಗುರುನಾಥಗೌಡ ಉಳ್ಳಾಗಡ್ಡಿ, ವೈದ್ಯಾಧಿಕಾರಿ ಡಾ. ಅಶೋಕ ಅಗರವಾಲ, ಸಿಪಿಐ ಮಠಪತಿ, ಪಿಎಸ್​ಐ ಲಾಲಸಾಬ್ ಜೂಲಕಟ್ಟಿ, ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಮಹಾಬಳೇಶ್ವರ ಹೆಬಸೂರ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವರ್ತಕರು ಹಾಗೂ ವ್ಯಾಪಾರಸ್ಥರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ವೇಳೆ ಮಹೇಶ ಬಾರದಾನ ಇಂಡಸ್ಟ್ರೀ ಕಂಪನಿ ಮಾಲೀಕ ಮಹೇಶ್ವರ ಅಂಗಡಿ 50 ಸಾವಿರ ರೂ. ಮೊತ್ತದ ಚೆಕ್ ಅನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಶಾಸಕ ಶಂಕರ ಪಾಟೀಲ ಮುನೇನಕೊಪ್ಪ ಮೂಲಕ ನೀಡಿದರು.