ಜಿಲ್ಲೆ

ಕೃಷಿ ಚಟವಟಿಕೆ ಆರಂಭ; ಏಪ್ರಿಲ್ ಮತ್ತು ಮೇ ತಿಂಗಳ ವಾಡಿಕೆ ಮಳೆಗಿಂತ ಉತ್ತಮ ಮಳೆ

ನೆಲಮಂಗಲ: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಬರಬೇಕಿದ್ದ ವಾಡಿಕೆ ಮಳೆಗಿಂತ ಅಧಿಕ ಪ್ರಮಾಣದಲ್ಲಿ ಮುಂಗಾರು ಪೂರ್ವ ಮಳೆಯಾಗಿದ್ದು, ತಾಲೂಕಿನಾದ್ಯಂತ ಕೃಷಿ ಚಟವಟಿಕೆಗಳು ಗರಿಗೆದರಿವೆ. ಕೆಲ ದಿನಗಳಿಂದ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಕಾಲುವೆಗಳಲ್ಲಿ ಹರಿಯುವ ನೀರು ಕೆರೆಕುಂಟೆಗಳಿಗೆ ಬರಲಾರಂಭಿಸಿದ್ದು, ರೈತರು ಬಿತ್ತನೆ ಕಾರ್ಯಗಳಿಗೆ ಸಿದ್ಧತೆ ನಡೆಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ 47 ಮಿ.ಮೀಟರ್ ವಾಡಿಕೆ ಮಳೆಯಾಗಬೇಕು, ಅದರ ಬದಲಿಗೆ 98.43 ಮೀ.ಮೀ ಮಳೆಯಾಗಿದೆ. ಮೇ ತಿಂಗಳಲ್ಲಿ 112 ಮಿ.ಮೀ. ವಾಡಿಕೆ ಮಳೆಯಾಗಬೇಕು ಅದರ ಬದಲಿಗೆ 106 ಮಿ.ಮೀ ಮಳೆಯಾಗಿರುವ ಬಗ್ಗೆ ತಾಲೂಕು ಕೃಷಿ ಇಲಾಖೆಯಲ್ಲಿ ವರದಿಯಾಗಿದೆ. ಈಗಾಗಲೇ ಮುಸುಕಿನ ಜೋಳ, ತೊಗರಿ, ಅಲಸಂದೆ ಮತ್ತು ನೆಲಗಡಲೆ ಭಿತ್ತನೆ ಮಾಡಲಾಗುತ್ತಿದೆ. ಮುಂದಿನ ಕೆಲ ವಾರಗಳಲ್ಲಿ ರಾಗಿ, ಅವರೆ, ಹುರುಳಿಯಂತಹ ಬೆಳೆಗಳ ಬಿತ್ತನೆ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಮೇವಿನ ಕೊರತೆ ನೀಗಿಸಿದ ಮಳೆ: ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಭರಣಿ ಮಳೆಯಾಗಿದ್ದು, ಜತೆಗೆ ಕೃತ್ತಿಕಾ ಮಳೆ ಮುಂಗಾರು ಪೂರ್ವದಲ್ಲೇ ಅತ್ಯಧಿಕವಾಗಿ ಸುರಿದು ರೈತರ ಮೊಗದಲ್ಲಿ ಸಂತಸ ತರಿಸಿದೆ. ಬೇಸಿಗೆಯಲ್ಲಿ ಮೇವಿನ ಕೊರತೆ ಎದುರಿಸಬೇಕಿದ್ದ ಜಾನುವಾರುಗಳಿಗೆ ಅನುಕೂಲವಾದ ವಾತವರಣ ಸೃಷ್ಟಿಯಾಗಿದೆ. ಕೃಷಿ ಇಲಾಖೆಯಿಂದ ಹಸಿರೆಲೆ ಬೀಜಗಳನ್ನು ವಿತರಣೆ ಮಾಡಲಾಗುತ್ತಿದ್ದು, ರೈತರು ಜಮೀನಿನ ಮಣ್ಣಿನ ಫಲವತ್ತತೆ ಹೆಚ್ಚಿಸಿಕೊಳ್ಳಬಹುದಾಗಿದೆ.

ತಾಲೂಕಿನ ರೈತರ ಬೇಡಿಕೆಯಂತೆ ಕೃಷಿ ಇಲಾಖೆಯಿಂದ ಭಿತ್ತನೆ ಬೀಜದ ಜತೆಗೆ ರಸಗೊಬ್ಬರವನ್ನು ಪೂರೈಕೆ ಮಾಡಿಕೊಳ್ಳಲಾಗಿದ್ದು, ಕೃಷಿಗೆ ಯಾವುದೇ ಕೊರೆತೆ ಇರುವುದಿಲ್ಲ. ಕೆಲವೆಡೆ ಮುಸುಕಿನ ಜೋಳಕ್ಕೆ ಲದ್ದಿಹುಳುವಿನ ಭಾದೆ ಆರಂಭವಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು. ಸುಶೀಲಮ್ಮ, ತಾಲೂಕು ಕೃಷಿ ಸಹಾಯಕ ನಿರ್ದೇಶಕಿ