ಗದಗ: ಗದಗ ಜಿಲ್ಲೆಯಲ್ಲಿ ಫಲವತ್ತಾದ ಭೂಮಿ ಇದ್ದು, ಕೃಷಿ ಚಟುವಟಿಕೆಗಳಿಗೆ ವಿಪುಲ ಅವಕಾಶಗಳಿವೆ. ಕೃಷಿಯನ್ನೇ ಹೆಚ್ಚಾಗಿ ಅವಲಂಬಿಸಿರುವ ಈ ಭಾಗದಲ್ಲಿ ಕೃಷಿ ಕಾಲೇಜ್ ಸ್ಥಾಪನೆಗೆ ಸರ್ಕಾರ ಮುಂದಾಗಬೇಕೆಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ವಿಶ್ರಾಂತ ಸದಸ್ಯ ಗುರುನಾಥಗೌಡ ಓದುಗೌಡರ ಹೇಳಿದರು.
ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ರೈತರಿಗೆ ಕೃಷಿಯಲ್ಲಿ ಹೆಚ್ಚು ಇಳುವರಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಆಧುನಿಕ ಮತ್ತು ಸಾಂಪ್ರದಾಯಿಕ ಕೃಷಿಯಲ್ಲಿ ಸಾಧನೆಗೆ ಪ್ರೇರಣೆ ದೊರೆಯಲು ಗದಗ ಪರಿಸರದಲ್ಲಿ ಕೃಷಿ ಕಾಲೇಜ್ ಅವಶ್ಯವಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೃಷಿ ಕಾಲೇಜ್ ತೆರೆಯಲು ಸರ್ಕಾರ ಮುಂದಾಗಿದೆ. ಬಳ್ಳಾರಿ ಜಿಲ್ಲೆಯ ಪ್ರಸ್ತಾವನೆಯೂ ಇದ್ದು, ಇದರೊಂದಿಗೆ ಗದುಗಿನಲ್ಲೂ ಕೃಷಿ ಕಾಲೇಜ್ ಸ್ಥಾಪನೆ ಆಗಬೇಕು ಎಂದರು.
ಶಿರಹಟ್ಟಿ ಕೃಷಿ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುರೇಶ ಕುಂಬಾರ, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಕೆ.ಐ. ಕುರುಗೋಡ, ಹುಲಕೋಟಿ ಕೆವಿಕೆಯ ಸಸ್ಯ ಸಂರಕ್ಷಣಾ ವಿಜ್ಞಾನಿ ಎಸ್.ಕೆ.ಮುದ್ಲಾಪೂರ, ಮೇವುಂಡಿಯ ಡೀಲ್ ಫೌಂಡೇಷನ್ ಉಪಾಧ್ಯಕ್ಷ ಸುರೇಂದ್ರ ಶ್ರಾಪ್ ಮಾತನಾಡಿದರು.
ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಸಿ.ಎಂ. ರಫಿ ಮಾತನಾಡಿ, ಹೆಚ್ಚು ಇಳುವರಿ ತೆಗೆಯಲು ರೈತರಿಗೆ ಮಾರ್ಗದರ್ಶನ ನೀಡುವ ಕಾರ್ಯದಲ್ಲಿ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ತೊಡಗಿದೆ ಎಂದರು.
ಸೇವಾ ನಿವೃತ್ತಿ ಹೊಂದಿದ ಕೇಂದ್ರದ ಉಪ ಆಡಳಿತಾಧಿಕಾರಿ ರಾಮಚಂದ್ರ ಕುಲಕರ್ಣಿ ಹಾಗೂ ರೇಣುಕಾ ಕುಲಕರ್ಣಿ ದಂಪತಿಯನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಡಾ.ಸುಭಾಸ ಶಿವನಗೌಡರ, ಅರವಿಂದ ಸತ್ತರಡ್ಡಿ, ಶಿವಪ್ಪ ಗುಡಗೇರಿ, ಎಸ್.ಎಂ. ಕುರಿ, ಪ್ರಕಾಶ ಕರಿಸೋಮನಗೌಡರ, ವಿ.ಜಿ.ಹಿರೇಗೌಡರ, ವಿನಾಯಕ ಕುಲಕರ್ಣಿ ಇದ್ದರು.
ಎಸ್.ಎ. ಸೂಡಿಶೆಟ್ಟರ್ ಸ್ವಾಗತಿಸಿದರು ಡಾ.ಎ.ಕೆ. ನಾಶಿ ಪರಿಚಯಿಸಿ ನಿರೂಪಿಸಿದರು.