ಜಿಲ್ಲೆ

ಕೃಷಿ ಕಾರ್ಯ ಬಲು ಜೋರು, ಉಪಕರಣಗಳ ಖರೀದಿಗೆ ಮುಂದಾದ ರೈತರು ಸಾಂಪ್ರದಾಯಿಕ ಪರಿಕರಗಳಿಗೆ ಡಿಮಾಂಡ್

ಸುಗ್ಗರಾಜು ಜಿ.ಕೆ. ನೆಲಮಂಗಲ

ತಾಲೂಕಿನಾದ್ಯಂತ ಸಮೃದ್ಧ ಮಳೆಯಾಗಿದ್ದು, ಬಿತ್ತನೆ ಕಾರ್ಯ ಮುಗಿಸಿರುವ ರೈತರು, ಅಗತ್ಯ ಕೃಷಿ ಉಪಕರಣಗಳ ಖರೀದಿಗೆ ಮುಂದಾಗಿದ್ದಾರೆ.

ಈ ಸಲ ಮುಂಗಾರು ಪೂರ್ವದಲ್ಲೇ ವಾಡಿಕೆಗಿಂತ ಮೂರು ಪಟ್ಟು ಹೆಚ್ಚು ಮಳೆಯಾದ ಕಾರಣ ಕೆಲ ರೈತರು ಮುಂಚಿತವಾಗಿಯೇ ಬಿತ್ತ್ತನೆ ಮಾಡಿದ್ದರು. ಈಗ ಕಳೆ ತೆಗೆಯಲು ಉಪಕರಣ ಕೊಳ್ಳಲು ಮುಂದಾಗಿದ್ದಾರೆ.

ಗ್ರಾಮಾಂತರ ಜಿಲ್ಲೆಯ ವಿವಿಧ ತಾಲೂಕು ಕೇಂದ್ರಗಳಲ್ಲಿ ನಡೆಯುವ ಸಂತೆಗಳಲ್ಲಿ ಬಿತ್ತನೆ ಬಳಿಕ ರೈತರಿಗೆ ಬೇಕಾಗುವ ಕುಂಟೆ, ದಾಯದ ಹಲುಬೆ, ಯಗ್ಗುಂಟೆ, ಧರಲೆ, ಕಬ್ಬಿಣದ ಚಿಪ್ಪುಗಳಂತಹ ಸಾಂಪ್ರದಾಯಿಕ ಸಿದ್ಧ ಕೃಷಿ ಉಪಕರಣಗಳ ಮಾರಾಟದ ಭರಾಟೆ ಜೋರಾಗಿದೆ.

ಕೆಲ ದಶಕಗಳ ಹಿಂದೆ ಜಮೀನು ಉಳುಮೆ ಮಾಡಲು ನೇಗಿಲು, ನೊಗ, ಕಳೆ ತೆಗೆಯಲು ಬಳಸುವ ಉಪಕರಣಗಳನ್ನು ರೈತರೇ ಬಡಗಿಗಳ ಮೂಲಕ ತಯಾರು ಮಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಳೆಯ ಅಭಾವ, ಆಧುನಿಕ ಯಂತ್ರೋಪಕರಣಗಳ ಭರಾಟೆ ಹೆಚ್ಚಾಗಿದ್ದು, ಸಿದ್ಧ ಉಪಕರಣಗಳ ಮೊರೆ ಹೋಗುವವರ ಸಂಖ್ಯೆ ಹೆಚ್ಚಾಗಿದೆ.

ವರ್ಷದ ಜೂನ್, ಜುಲೈ ಮತ್ತು ಆಗಸ್ಟ್ ಅಂತ್ಯದವರೆಗೆ ಸಾಂಪ್ರದಾಯಿಕ ಕೃಷಿ ಉಪಕರಣಗಳ ಬೇಡಿಕೆ ಹೆಚ್ಚಾಗಿದ್ದು, ಮೂರು ತಿಂಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ತಪ್ಪದೇ ಕೃಷಿ ಉಪಕರಣಗಳನ್ನು ಮಾರಾಟ ಮಾಡಲಾಗುತ್ತದೆ. ಸಾಂಪ್ರದಾಯಿಕ ಉಪಕರಣಗಳ ಮಾರಾಟಗಾರರಿಗೆ ಹೂಡಿದ ಬಂಡವಾಳದಷ್ಟೇ ಲಾಭವೂ ಸಿಗುವುದರಿಂದ ಪ್ರತಿ ವರ್ಷ ಬೇಡಿಕೆಗೆ ತಕ್ಕಂತೆ ಉಪಕರಣ ತಯಾರಿಸಿ ಮಾರಾಟ ಮಾಡುವುದನ್ನೆ ಕಸುಬಾಗಿಸಿಕೊಂಡಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕು ಮಧುರೆ ಭಾಗದ ಕುಟುಂಬಗಳು ರೈತರಿಗೆ ಸಾಂಪ್ರದಾಯಿಕ ಕೃಷಿ ಉಪಕರಣ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದು, ಜಿಲ್ಲೆ, ರಾಮನಗರ, ತುಮಕೂರು ಜಿಲ್ಲೆಗಳ ರೈತರೂ ಪ್ರತಿ ಶುಕ್ರವಾರ ನಡೆಯುವ ಪಟ್ಟಣದ ಸಂತೆಗೆ ಬರುತ್ತಾರೆ. ಆಧುನಿಕ ಬೇಸಾಯ ಪದ್ಧತಿ, ಯಂತ್ರೋಪಕರಣಗಳ ಬಳಕೆ ನಡುವೆಯೂ ಸಾಂಪ್ರದಾಯಿಕ ಕೃಷಿ ಉಪಕರಣಗಳ ಬಳಕೆ ಕಡಿಮೆಯಾಗಿಲ್ಲ. ಅದೇ ರೀತಿ ಕೃಷಿ ಭೂಮಿ ವಸತಿ ಬಡಾವಣೆಗಳಾಗಿ ಬದಲಾಗುತ್ತಿರುವುದನ್ನು ತಡೆದಲ್ಲಿ ಮಾತ್ರ ಸಾಂಪ್ರದಾಯಿಕ ಕೃಷಿ ಪರಿಕರ ತಯಾರಿಸುವವರ ಬದುಕೂ ಸ್ಥಿರವಾಗುತ್ತದೆ.

ನಾಲ್ಕೈದು ದಶಕಗಳಿಂದ ಕೃಷಿ ಉಪಕರಣಗಳನ್ನು ವಿವಿಧ ಸಂತೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಕೋವಿಡ್ ಹಿನ್ನೆಲೆಯಲ್ಲಿ ಇತ್ತೀಚೆಗೆ ಹೆಚ್ಚು ಮಂದಿ ಕೃಷಿ ಕಾಯಕದಲ್ಲಿ ತೊಡಗಿಸಿಕೊಂಡಿದ್ದು, ಈ ಬಾರಿ ಬಹುತೇಕ ಕೃಷಿ ಉಪಕರಣಗಳಿಗೆ ಬೇಡಿಕೆ ಹೆಚ್ಚಾಗಿದೆ. ಲೋಕೇಶ್‌ಚಾರ್, ವ್ಯಾಪಾರಿ