ಹೊಳೆಆಲೂರ: ಬಿಡುವಿನ ಸಮಯದಲ್ಲಿ ಕೃಷಿ ಕಾಯಕ ಮಾಡುತ್ತಲೇ ನಿತ್ಯ ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದಿ ಪಿಯುಸಿ ಕಲಾ ವಿಭಾಗದಲ್ಲಿ 89.67 ಅಂಕ ಗಳಿಸುವ ಮೂಲಕ ಕಾಲೇಜ್ಗೆ ಪ್ರಥಮ ಸ್ಥಾನ ಗಳಿಸಿದ ಕಲ್ಮೇಶ್ವರ ಕಾಲೇಜ್ ವಿದ್ಯಾರ್ಥಿನಿ ಜ್ಯೋತಿ ಬಸವರಾಜ ಬಾಲನಗೌಡ್ರ ಮಾದರಿಯಾಗಿದ್ದಾಳೆ.
ಸಮೀಪದ ಮಾಡಲಗೇರಿ ಗ್ರಾಮದ ಕೃಷಿ ಕುಟುಂಬದ ಗ್ರಾಮೀಣ ಪ್ರತಿಭೆ ಜ್ಯೋತಿ ಮನೆ ಕೆಲಸ ಹಾಗೂ ಬಿಡುವಿನ ಅವಧಿಯಲ್ಲಿ ತಂದೆ- ತಾಯಿಗೆ ಹೊಲದ ಕೆಲಸದಲ್ಲಿ ಸಹಾಯ ಮಾಡುತ್ತಲೇ ಉತ್ತಮ ಅಂಕ ಗಳಿಸಿದ್ದು ಗ್ರಾಮಸ್ಥರು ಹಾಗೂ ಕಾಲೇಜ್ ಶಿಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಕೂಲಿ ಕೆಲಸ ಮಾಡುವ ತಾಯಿ ಬಸಮ್ಮ ಮಗಳ ಉನ್ನತ ವ್ಯಾಸಂಗದ ಕನಸು ಕಂಡವರು. ತಾಯಿಯ ಆಸೆಗೆ ತಕ್ಕಂತೆ ಜ್ಯೋತಿ ಮನೆ ಕೆಲಸ ಹಾಗೂ ಕೃಷಿ ಕೆಲಸದಲ್ಲೂ ತೊಡಗಿಸಿಕೊಂಡು ಹೊಳೆಆಲೂರ ಕಲ್ಮೇಶ್ವರ ಕಾಲೇಜಿನಲ್ಲಿ ಉತ್ತಮವಾಗಿ ಓದುತ್ತ ಸೈ ಎನಿಸಿಕೊಂಡಿದ್ದಾಳೆ.
ಬಹುಮುಖ ಪ್ರತಿಭೆ: ತಂದೆ ಬಸವರಾಜ ಕಳೆದ 20 ವರ್ಷಗಳಿಂದ ನಾಟಕ ಕಲಾವಿದರು. ರಕ್ತ ರಾತ್ರಿ, ಗೂಂಡಾಗಿರಿ, ನರನಾಗರ, ಸಿಡಿದೆದ್ದ ಸೇಡಿನ ಹುಲಿ, ಮನೆಗೆ ತಕ್ಕ ಮಗ, ಸಂಗೊಳ್ಳಿ ರಾಯಣ್ಣ ಸೇರಿ ಹಲವು ನಾಟಕಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಲ್ಲದೆ, ಪುಟ್ಟರಾಜ ನಾಟ್ಯ ಸಂಘ ಕಟ್ಟಿಕೊಂಡು ನಾಟಕ ನಿರ್ದೇಶನ ಮಾಡುತ್ತ ಗ್ರಾಮೀಣ ಯುವ ಪ್ರತಿಭೆಗಳಿಗೆ, ಕಲಾವಿದರಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ದಸರಾ, ಹಂಪಿ, ಚಾಲುಕ್ಯ, ಲಕ್ಕುಂಡಿ ಇತರೆ ಉತ್ಸವಗಳಲ್ಲಿ ಭಾಗವಹಿಸುತ್ತ ಬಂದಿದ್ದಾರೆ. ತಂದೆಯ ಬಳುವಳಿ ಎಂಬಂತೆ ಜ್ಯೋತಿ ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ನಾಟಕ, ಏಕ ಪಾತ್ರಾಭಿನಯದಲ್ಲೂ ಪರಿಣಿತಳು.
ಕಾಲೇಜ್ ವತಿಯಿಂದ ವಿವಿಧ ಪ್ರತಿಭಾ ಸ್ಪರ್ಧೆಗಳಲ್ಲಿ ಜಿಲ್ಲಾ, ರಾಜ್ಯ ಮಟ್ಟದವರೆಗೆ ಭಾಗವಹಿಸಿ ಕಾಲೇಜ್ಗೆ ಕೀರ್ತಿ ತಂದಿದ್ದಾಳೆ ಜ್ಯೋತಿ. ಕಾಲೇಜ್ನಲ್ಲಿ ಇವಳ ಬಹುಮುಖ ಪ್ರತಿಭೆಯನ್ನು ಗುರುತಿಸಿದ ಉಪನ್ಯಾಸಕ ಬಿ.ಕೆ. ಸುರಕೋಡ ಹಾಗೂ ಗೀತಾ ಪೊಲೀಸ್ಪಾಟೀಲ ಸಾಧನೆಗೆ ಪ್ರೋತ್ಸಾಹ ನೀಡುತ್ತ ಬಂದಿದ್ದಾರೆ. ಅವರ ಸಲಹೆಯನ್ನು ಗಂಭೀರವಾಗಿ ಪರಿಗಣಿಸಿದ ಜ್ಯೋತಿ ಕಲ್ಮೇಶ್ವರ ವಸತಿ ನಿಲಯದಲ್ಲಿ ಅಭ್ಯಾಸ ಮಾಡುತ್ತ ಜೊತೆಗೆ ನಿತ್ಯ ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದಿ ಶೇ. 89.67 ಅಂಕ ಗಳಿಸುವ ಮೂಲಕ ಕಾಲೇಜ್ಗೆ ಪ್ರಥಮ ಸ್ಥಾನ ಗಳಿಸಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಮಾಡಲಗೇರಿ ಗ್ರಾಮಸ್ಥರು, ಹೊಳೆಆಲೂರಿನ ಕಲ್ಮೇಶ್ವರ ಕಾಲೇಜ್ ಶಿಕ್ಷಕರು, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
ಶಿಕ್ಷಕರ ಪ್ರೋತ್ಸಾಹ ನನ್ನ ಕಲಿಗೆಗೆ ಅನುಕೂಲ ವಾಯಿತು. ಹಾಗೆಯೇ ನಿತ್ಯ ವಿಜಯವಾಣಿ ವಿದ್ಯಾರ್ಥಿ ಮಿತ್ರ ಓದಿದ್ದರಿಂದ ಪರೀಕ್ಷೆಗೆ ಸಹಕಾರಿ ಯಾಯಿತು. | ಜ್ಯೊತಿ ಬಾಲನಗೌಡ್ರ