ಜಿಲ್ಲೆ

ಕೃಷಿ ಉತ್ಪಾದಕತೆ ಹೆಚ್ಚಿಸಿ:ಡಿಸಿ ನಲಿನ್

ಕೊಪ್ಪಳ: ಕೃಷಿ ಹಾಗೂ ಕೃಷಿ ಸಂಬಂಧಿತ ಇಲಾಖೆಗಳು ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆಯಡಿ ಸಮನ್ವಯ ಸಾಧಿಸಿ ಕಾರ್ಯಕ್ರಮ ಅನುಷ್ಠಾನ ಮಾಡಿ. ಕೃಷಿ ಉತ್ಪಾದಕತೆ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿ ನಲಿನ್ ಅತುಲ್ ಸೂಚಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.


ರೈತ ಉತ್ಪಾದಕತೆ ಬಲವರ್ಧನೆ, ರೈತ ಉತ್ಪನ್ನಗಳ ಮೌಲ್ಯವರ್ಧನೆ, ಏಕರೂಪದ ಬ್ರಾಂಡಿಂಗ್‌ಗೆ ಆದ್ಯತೆ ನೀಡಿ. ಮಾರುಕಟ್ಟೆ ಸಂಪರ್ಕ ಕಲ್ಪಿಸಿ. ತೋಟಗಾರಿಕೆ ಉತ್ಪನ್ನಗಳಿಗೆ ಹಾಪ್‌ಕಾಮ್ಸ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲು ಸೂಚಿಸಿ. ಭತ್ತ ಬೆಳೆವೆಡೆ ಮೀನುಗಾರಿಕೆ, ಕೋಳಿ, ಬಾತುಕೋಳಿ ಸಾಕಣೆಗೆ ರೈತರನ್ನು ಪ್ರೋತ್ಸಾಹಿಸಿ. ಟ್ರೀ ಪಾಕ್ ಕಾನ್ಸೆಪ್ಟ್ ಅಳವಡಿಸಿ. ರೈತರಿಗೆ ನೆರವು ನೀಡಿ ಮಾರುಕಟ್ಟೆ ಸೌಲಭ್ಯ ಕಲ್ಪಿಸಿ. ಮಣ್ಣು, ನೀರು ಸಂರಕ್ಷಣಾ ಕಾಮಗಾರಿಗಳಡಿ ನಿರ್ಮಿಸುವ ಕಂದಕ, ಬದುಗಳಲ್ಲಿ ಗಿಡ ನೆಡಿ. ತೋಟಗಾರಿಕೆಮ ರೇಷ್ಮೆ, ಪಶು ಸಂಗೋಪನೆ, ಮೀನುಗಾರಿಕೆ, ಸಾಮಾಜಿಕ ಅರಣ್ಯ, ಅರಣ್ಯ, ಸಹಕಾರ, ಎಪಿಎಂಸಿ, ಕೃಷಿ ವಿಸ್ತರಣಾ ಕೇಂದ್ರದ ಅಧಿಕಾರಿಗಳು ಸಮನ್ವಯ ಸಾಧಿಸುವಂತೆ ನಿರ್ದೇಶಿಸಿದರು.


ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ. ರಾಜ್ಯದ 20 ಜಿಲ್ಲೆಯಲ್ಲಿ 20 ಉಪ ಜಲಾನಯನ ಕ್ಷೇತ್ರಗಳಲ್ಲಿ ರೀವರ್ಡ್ ಅನುಷ್ಠಾನಗೊಳಿಸಲಾಗುತ್ತಿದೆ. ಜಿಲ್ಲೆಯ ಅಳವಂಡಿ, ಕವಲೂರು, ಹಟ್ಟಿ, ಮುರ್ಲಾಪೂರ ಉಪ ಜಲಾನಯನದ 14 ಕಿರು ಜಲಾನಯನಗಳಲ್ಲಿ ಕಾರ್ಯಕ್ರಮ ಅನುಷ್ಠಾನಕ್ಕೆ ಅನುಮೋದನೆ ದೊರೆತಿದೆ. ಧಾರವಾಡ ಕೃಷಿ ವಿವಿ ಸಮೀಕ್ಷೆ ನಡೆಸಿದ್ದಾರೆ. ಮಣ್ಣು, ನೀರು ಸಂರಕ್ಷಣೆ ಕುರಿತು ವೈಜ್ಞಾನಿಕ ಅಧ್ಯಯನ ನಡೆದಿದ್ದು, ಪ್ರತಿ ಸರ್ವೇ ನಂಬರ್‌ನ ಮಣ್ಣಿನ ಮಾಹಿತಿ ಸಂಗ್ರಹಿಸಿ ಶಿಫಾರಸ್ಸು ಮಾಡಲಾಗಿದೆ. ರೈತರೊಂದಿಗೆ ಚರ್ಚಿಸಿ, ಗ್ರಾಪಂನಲ್ಲಿ ಅನುಮೋದನೆ ಪಡೆದು ವರದಿ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.


ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ, ಕೃಷಿ ಉಪ ನಿರ್ದೇಶಕ ಸಹದೇವ ಯರಗೊಪ್ಪ ಇತರರಿದ್ದರು.