ಚಿಕ್ಕಬಳ್ಳಾಪುರ : ಕರೊನಾ ಸೃಷ್ಟಿಸಿರುವ ಗಂಭೀರ ಪರಿಸ್ಥಿತಿಯು ಕಲಿಸಿರುವ ಪಾಠದಿಂದ ರಾಜ್ಯಾದ್ಯಂತ ಕೃಷಿ ಉತ್ಪನ್ನಗಳ ಸಂರಕ್ಷಣೆಗೆ ಶೀತಲಗೃಹ ಮತ್ತು ಆಹಾರ ಪದಾರ್ಥಗಳ ಸಂಸ್ಕರಣೆ ಘಟಕಗಳ ಸ್ಥಾಪನೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.
ದೇಶದಲ್ಲಿ ಲಾಕ್‌ಡೌನ್‌ನಿಂದ ರೈತರು ದೊಡ್ಡ ಪೆಟ್ಟು ತಿಂದಿದ್ದಾರೆ. ಪ್ರಾರಂಭದಲ್ಲಿ ಸಾಗಣೆಗೆ ಅವಕಾಶ ನೀಡದಿರುವುದರಿಂದ ಉತ್ಪನ್ನಗಳ ಬೇಡಿಕೆ ಕುಸಿದು ಕೃಷಿ, ತೋಟಗಾರಿಕೆ ಕ್ಷೇತ್ರವು ಬೃಹತ್ ಪ್ರಮಾಣದಲ್ಲಿ ನಷ್ಟ ಕಂಡಿದೆ. ಭವಿಷ್ಯದಲ್ಲೂ ಇಂತಹ ಪರಿಸ್ಥಿತಿ ಎದುರಿಸಬೇಕಾದ ಸಾಧ್ಯತೆ ಹೆಚ್ಚು. ಇದಕ್ಕೆ ಉತ್ಪನ್ನಗಳು ಕೊಳೆತು ಹೋಗದಿರಲು ಶೀತಲಗೃಹ ಮತ್ತು ಆಹಾರ ಪದಾರ್ಥಗಳ ಸಂಸ್ಕರಣೆ ಘಟಕಗಳು ಹೆಚ್ಚಿಗೆ ಸ್ಥಾಪನೆಯಾಗಬೇಕಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಸ್ತುತ ಸಮರ್ಪಕವಾಗಿ ಕೃಷಿ ಚಟುವಟಿಕೆ ನಡೆಯದಿದ್ದಲ್ಲಿ ಮುಂದಿನ ಮೂರು ತಿಂಗಳ ಅವಧಿಯಲ್ಲಿ ಆಹಾರ ಉತ್ಪನ್ನಗಳ ಕೊರತೆ ಸಮಸ್ಯೆ ಉದ್ಭವವಾಗಲಿದೆ. ಇದನ್ನರಿತು ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಪಾಲನೆಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಅಂತಾರಾಜ್ಯ ಮತ್ತು ಜಿಲ್ಲಾವಾರು ಕೃಷಿ ಉತ್ಪನ್ನಗಳ ಸಾಗಣೆ, ಮಾರಾಟ ಸೇರಿ ಅಗತ್ಯ ನಿರ್ವಹಣೆಗೆ ಮುಕ್ತ ಅವಕಾಶ ನೀಡಲಾಗಿದೆ ಎಂದರು.
ವರದಿ ಬಳಿಕ ಪ್ಯಾಕೇಜ್ ಚಿಂತನೆ : ಲಾಕ್‌ಡೌನ್‌ಗೆ ಕೃಷಿ ಉತ್ಪನ್ನಗಳು ಸಾಗಣೆ ಇಲ್ಲದೆ ರೈತರು ನಷ್ಟ ಅನುಭವಿಸಿದ್ದಾರೆ. ಇದಕ್ಕೆ ರಾಜ್ಯದಲ್ಲಿ ಬೆಳೆನಾಶದ ಸರ್ವೇ ಕೈಗೊಳ್ಳಲು ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಲಾಗಿದೆ. ಇದರ ಬಗ್ಗೆ ಸಮಗ್ರ ವರದಿ ಬರಬೇಕು. ಬಳಿಕ ರಾಜ್ಯದ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವುದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಪ್ರಸ್ತುತ ಯಾವುದೇ ಕೊಡುಗೆ ಘೋಷಣೆಯ ಯೋಚನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ 32 ಪ್ರಕರಣ ದಾಖಲು : ರೈತರಿಗೆ ಕಳಪೆ ಔಷಧ ಪೂರೈಕೆಯ 32 ಪ್ರಕರಣ ದಾಖಲಿಸಲಾಗಿದೆ. ವ್ಯಾಪಕವಾಗಿ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಮಾರಾಟವಾಗಿದ್ದ ಔಷಧಗಳ ಗುಣಮಟ್ಟವನ್ನು ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು. ಇದೇ ವೇಳೆ 370 ಸ್ಯಾಂಪಲ್ ಗಳ ಪೈಕಿ 175 ಸ್ಯಾಂಪಲ್ ಗಳು ಕಳಪೆ ಎಂಬುದು ದೃಢಪಟ್ಟಿದೆ. ಚಿಕ್ಕಬಳ್ಳಾಪುರದಲ್ಲಿ ಸಿರಿ ಅಗ್ರಿ ಫುಟ್ ಸಂಸ್ಥೆಯ 28 ಲಕ್ಷ ರೂ ಮೌಲ್ಯದ ಕಳಪೆ ಔಷಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಇಲಾಖೆ ಅಧಿಕಾರಿಗಳಿಗೆ ಅನಿರೀಕ್ಷಿತವಾಗಿ ಗೊಬ್ಬರದ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಲು, ಯಾರೇ ಎಷ್ಟೇ ದೊಡ್ಡವರಾದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
45 ಕೋಟಿ ರೂ ಬಿಡುಗಡೆ: ಆಲಿಕಲ್ಲು ಮಳೆಗೆ ಕೊಪ್ಪಳ, ಗಂಗಾವತಿ ಸೇರಿ ವಿವಿಧೆಡೆ 29,971 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ನಾಶವಾಗಿರುವುದರ ಬಗ್ಗೆ ವರದಿ ಬಂದಿದೆ. ಇದಕ್ಕೆ ರಾಷ್ಟ್ರೀಯ ಮತ್ತು ರಾಜ್ಯ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ತುರ್ತಾಗಿ 45 ಕೋಟಿ ರೂ ಬಿಡುಗಡೆಗೊಳಿಸಲಾಗಿದೆ. ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ 957 ಕೋಟಿ ರೂ ಮತ್ತು ರಾಜ್ಯದಿಂದ 600 ಕೋಟಿ ರೂ ಬಿಡುಗಡೆಯಾಗಿದೆ. ಈಗಾಗಲೇ 49.57 ಲಕ್ಷ ಮಂದಿ ರೈತರ ಖಾತೆಗೆ ತಲಾ 2 ಸಾವಿರ ರೂ ನೇರವಾಗಿ ಜಮಾ ಆಗಿದೆ ಎಂದು ಸಚಿವರು ತಿಳಿಸಿದರು.