ಜಿಲ್ಲೆ

ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ

ಬೇಲೂರು: ಬೇಲೂರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರದಲ್ಲಿ ವರ್ತಕರ ರಾಗಿ ಖರೀದಿಸುತ್ತ, ರೈತರ ಶೋಷಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ತಾಲೂಕು ರೈತ ಸಂಘದ ಮುಖಂಡರು ಶನಿವಾರ ಸಂಜೆ ಪ್ರತಿಭಟಿಸಿದರು.


ರೈತ ಸಂಘದ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸ್ವಾಮಿಗೌಡ ಮಾತನಾಡಿ, ಸರ್ಕಾರ ರಾಗಿ ಬೆಳೆಗೆ ಬೆಂಬಲ ಬೆಲೆ ನೀಡಿ ಕ್ವಿಂಟಾಲ್ ರಾಗಿಯನ್ನು 3578 ರೂ, ಗೆ ಖರೀದಿಸುತ್ತಿದೆ. ಆದರೆ ರಾಗಿ ಕೇಂದ್ರದಲ್ಲಿ ರೈತರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ, ನೋಂದಾಣಿ ಮಾಡಿಸಿದ ರೈತರಿಗೆ ಪ್ರತಿದಿನ ಇಂತಿಷ್ಟು ರಾಗಿ ಖರೀದಿಸುತ್ತೇವೆಂದು ಟೋಕನ್ ನೀಡಲಾಗುತ್ತಿದೆ, ಅದರಂತೆ ರೈತರು ರಾಗಿ ತಂದರೆ ರಾತ್ರಿವರೆಗೂ ಕಾಯಿಸಿ ಈಗ ರಾಗಿ ತೆಗೆದುಕೊಳ್ಳುವುದಿಲ್ಲ ಎಂದು ಹೇಳುತ್ತಿದ್ದಾರೆ. ಕಾರಣ ಕೇಳಿದರೆ ಲಾರಿಯಲ್ಲಿ ನಿಮ್ಮ ರಾಗಿ ಹಾಕಲು ಜಾಗವಿಲ್ಲ ಎಂದು ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿದ ಅವರು ಖರೀದಿಗೆ ನಿಗದಿಪಡಿಸಿ ಟೋಕನ್ ನೀಡಿದ ದಿನವೇ ರೈತರು ರಾಗಿ ತಂದಿದ್ದು ಲಾರಿಯಲ್ಲಿ ಜಾಗವಿಲ್ಲವೆಂದರೆ ಏನಾರ್ಥ, ಅಧಿಕಾರಿಗಳು ವರ್ತಕರ ಲಾಭಿಗೆ ಮಣಿದು ರಾಗಿ ಖರೀದಿಸುತ್ತಿರುವುದರಿಂದ ಸಮಸ್ಯೆ ಉದ್ಬವಿಸಿದೆ. ರೈತರು ರಾಗಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋಗಿ ಪುನ: ನಾಳೆ ತರಲೂ ಖರ್ಚಾಗುವ ಹಣವನ್ನು ನೀಡುವರಾರು? ಕ್ವಿಂಟಾಲ್ ಗೆ 50 ರೂ ನೀಡಿದರೆ ಬೇಗ ತೂಕ ಮಾಡಿ ತೆಗೆದು ಕೊಳ್ಳುತ್ತಿದ್ದಾರೆ, ಹಣ ನೀಡದವರಿಗೆ ರಾತ್ರಿಯದರೂ ನಿಲ್ಲಿಸಿ ಕೊಂಡಿರುತ್ತಾರೆ, ರಾಗಿ ಕೇಂದ್ರದ ಅಧಿಕಾರಿ ಉಡಾಫೆ ವರ್ತನೆ ತೋರುತ್ತಿದ್ದಾರೆ. ಖರೀದಿ ಕೇಂದ್ರ ಮತ್ತು ರಾಗಿ ಸಾಗಿಸುವ ಟ್ರಾನ್ಸ್ ಪೊರ್ಟ್‌ನವರು ರೈತರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಆರೋಪಿಸಿ, ಖರೀದಿ ಕೇಂದ್ರದ ಅಧಿಕಾರಿ ರೈತರಿಗೆ ತೊಂದರೆಯಾಗದಂತೆ ರಾಗಿ ಖರೀದಿ ಮಾಡಬೇಕು ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ರೈತ ಸಂಘದ ಮುಖಂಡರಾದ ಬಸವರಾಜು, ಧರ್ಮೇಗೌಡ, ನಿಂಗೇಗೌಡ, ಪೂರ್ಣೇಶ್, ಪ್ರವೀಣ್ ಕುಮಾರ್, ವಿಜಯ್ ಹರೀಶ್ ಇತರರಿದ್ದರು.