ಕುಂದೂರಿನಲ್ಲಿ ಹೇರೂರು ಯುವ ಒಕ್ಕಲಿಗ ವೇದಿಕೆಯನ್ನು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಉದ್ಘಾಟಿಸಿದರು. ಕಿಬ್ಳಿ ಪ್ರಸನ್ನಕುಮಾರ್, ವಿಜೇಂದ್ರ ನಿಡುವಾನೆ, ರಾಜಶೇಖರ್, ಪೃಥ್ವಿರಾಜ್ ಕೌರಿ, ಎಸ್.ಎಸ್.ವೆಂಕಟೇಶ್ ಇತರರಿದ್ದರು. 
ಜಿಲ್ಲೆ

ಕೃಷಿ, ಅವಿಭಕ್ತ ಕುಟುಂಬದಲ್ಲಿದೆ ಸ್ವರ್ಗ

ಎಸ್.ಎನ್.ರವೀಂದ್ರ

ಜಯಪುರ: ಸ್ವರ್ಗ-ನರಕ ಬೇರೆಲ್ಲೂ ಇರುವುದಿಲ್ಲ. ಅವಿಭಕ್ತ ಕುಟುಂಬದಲ್ಲಿ ಹಾಗೂ ಕೃಷಿ ಚಟುವಟಿಕೆಗಳಲ್ಲಿ, ಕೆಲಸದಲ್ಲಿ ಪ್ರಾಮಾಣಿಕತೆ ಹಾಗೂ ನಿಷ್ಠೆ ಬೆಳೆಸಿಕೊಂಡರೆ ಸ್ವರ್ಗ ಕಾಣಬಹುದು ಎಂದು ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಹೇಳಿದರು.

ಮೇಗುಂದಾ ಹೋಬಳಿ ಕುಂದೂರಿನಲ್ಲಿ ಹೇರೂರು ಯುವ ಒಕ್ಕಲಿಗ ವೇದಿಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ,

ದೇವರಿಗೆ ನಿಜವಾಗಲೂ ಹತ್ತಿರದಲ್ಲಿರುವವರು ಒಕ್ಕಲಿಗ. ಏಕೆಂದರೆ ಪ್ರತಿ ಹೆಜ್ಜೆಯಲ್ಲಿಯೂ ದೇವರನ್ನು ನೆನೆದು ಕೃಷಿ ಚಟುವಟಿಕೆ ಮಾಡುತ್ತಾನೆ. ಬೆಳೆದ ಪ್ರತಿ ದವಸ ಧಾನ್ಯವನ್ನೂ ದೇವರಿಗೆ ಸಮರ್ಪಿಸುತ್ತಾನೆ. ಆದ್ದರಿಂದ ಒಕ್ಕಲಿಗ ದೇವರಿಗೆ ಅತಿ ಹತ್ತಿರದಲ್ಲಿದ್ದಾನೆ ಎಂದರು.

ಸಂಘಟನೆ ಮಾಡಿದಾಗ ಅದರಿಂದ ಜನಸಾಮಾನ್ಯರಿಗೆ ಒಳ್ಳೆಯದಾಗಬೇಕು. ಅದು ಮಠದ ಬಯಕೆ. ಮುಂದಿನ ದಿನದಲ್ಲಿ ಬಿಜಿಎಸ್ ಆಸ್ಪತ್ರೆ ಸಹಯೋಗದಲ್ಲಿ ಆರೋಗ್ಯ ಉಚಿತ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸೋಣ ಎಂದು ತಿಳಿಸಿದರು.

ಚಿಕ್ಕಮಗಳೂರಿನ ವಕೀಲ ಎಸ್.ಎಸ್.ವೆಂಕಟೇಶ್ ಮಾತನಾಡಿ, ಎಲ್ಲ ಕ್ಷೇತ್ರಗಳಲ್ಲೂ ಒಕ್ಕಲಿಗರು ಸೇವೆ ಸಲ್ಲಿಸುವಲ್ಲಿ ವಿಶೇಷ ಪ್ರಯತ್ನ ಮಾಡಿದ್ದಾರೆ. ಒಕ್ಕಲಿಗರು ಮೂಲತಃ ಕೃಷಿ ಚಟುವಟಿಕೆಯಲ್ಲಿ ಇದ್ದು, ಇದರೊಂದಿಗೆ ಸಾಹಿತ್ಯ, ಕ್ರೀಡೆ, ರಾಜಕೀಯ, ನಗರ ಉದ್ಯೋಗಗಳಲ್ಲೂ ಕಾಣಿಸಿಕೊಂಡಿದ್ದಾರೆ. ಒಕ್ಕಲಿಗ ಸಮುದಾಯದಲ್ಲಿ ಜಾನಪದ ಕಲೆ ವಿಶೇಷವಾಗಿದ್ದು, ಎಲ್ಲ ಧಾರ್ಮಿಕ ಹಾಗೂ ಕೃಷಿ ಚಟುವಟಿಕೆಗಳಿಗೆ ಜಾನಪದ ಹಾಡುಗಳನ್ನು ಹಾಡುತ್ತಿದ್ದರು ಎಂದರು.

ಯುವ ಒಕ್ಕಲಿಗ ವೇದಿಕೆ ಗೌರವಾಧ್ಯಕ್ಷ ಪ್ರಸನ್ನಕುಮಾರ್ ಕಿಬ್ಳಿ ಮಾತನಾಡಿ, ಮೂಢನಂಬಿಕೆಗಳಿಗೆ ಬಲಿಯಾಗಿರುವ ಸಮಾಜದ ಜಾಗೃತಿಗಾಗಿ, ಸಮಾಜದಲ್ಲಿರುವ ಕೆಲ ಯುವಕರನ್ನು ದುಶ್ಚಟಗಳಿಂದ ದೂರ ಮಾಡಲು, ನಮ್ಮ ಸಂಸ್ಕೃತಿಯನ್ನು ಬೆಳೆಸುವುದು, ಆರ್ಥಿಕವಾಗಿ ಹಿಂದುಳಿದವರನ್ನು ಅಭಿವೃದ್ಧಿಪಡಿಸುವುದು, ಸಮಾಜದಲ್ಲಿ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಕಾರ ನೀಡುವ ಸಲುವಾಗಿ ವೇದಿಕೆಯನ್ನು ಪ್ರಾರಂಭಿಸಿದ್ದೇವೆ. ಇದರಲ್ಲಿ ರಾಜಕೀಯ ಉದ್ದೇಶ, ಜಾತಿ ಸಂಘಟನೆಗಾಗಿ ಸಂಘ ಆರಂಭಿಸಿಲ್ಲ ಎಂದು ಹೇಳಿದರು.

ಒಕ್ಕಲಿಗ ಸಮಾಜದ ಯುವ ಸಾಧಕರಾದ ಜಯಪುರ ಬಿಜಿಎಸ್ ಶಿಕ್ಷಕಿ ಡಿ.ಎನ್.ಅರ್ಪಿತಾ, ನಿವೃತ್ತ ಸೈನಿಕ ಹೆನ್ನಂಗಿಯ ಸಜಿತ್‌ಕುಮಾರ್, ಜೈ ಮಲ್ನಾಡ್ ್ರೆಂಡ್ಸ್‌ನ ಪ್ರಕಾಶ್ ಕೆಳಕೊಡಿಗೆ ಅವರನ್ನು ಗೌರವಿಸಲಾಯಿತು. ಹೋಬಳಿಯ ಸರ್ಕಾರಿ ಶಾಲೆಗಳ ಆಯ್ದ ಒಕ್ಕಲಿಗ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕುಂದೂರು ಸರ್ಕಾರಿ ಶಾಲೆಗೆ ಮಕ್ಕಳ ಕುರ್ಚಿಗಳನ್ನು ವಿತರಿಸಲಾಯಿತು. ಸೀಗೋಡಿನಿಂದ ಕುಂದೂರುವರೆಗೆ ವಾಹನ ಜಾಥಾ ನಡೆಸಲಾಯಿತು.

ಯುವ ಒಕ್ಕಲಿಗ ವೇದಿಕೆ ಅಧ್ಯಕ್ಷ ವಿಜೇಂದ್ರ ನಿಡುವಾನೆ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ರಾಜಶೇಖರ್, ನಿರ್ದೇಶಕ ಪೃಥ್ವಿರಾಜ್ ಕೌರಿ, ಶಿಕ್ಷಕ ರಾಘವೇಂದ್ರ, ಯುವ ಒಕ್ಕಲಿಗ ವೇದಿಕೆ ಕಾರ್ಯದರ್ಶಿ ವರುಣ್, ಖಜಾಂಚಿ ನಿರೀಕ್ಷಿತ್, ಉಪಾಧ್ಯಕ್ಷ ವಿಕ್ರಂ ಶಾಂತಿಪುರ, ನಿರ್ದೇಶಕರಾದ ನಾಗರಾಜ್, ರಕ್ಷಿತ್, ಸದಸ್ಯರು, ಐದುನೂರಕ್ಕೂ ಹೆಚ್ಚು ಒಕ್ಕಲಿಗ ಸಮುದಾಯದ ಜನರು ಇದ್ದರು.