ಜಿಲ್ಲೆ

ಕೃಪೆ ತೋರದ ಮುಂಗಾರು ಮಳೆ

ಮಂಜುನಾಥ ತಿಮ್ಮಯ್ಯ

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಅರಬ್ಬಿ ಸಮುದ್ರದಲ್ಲಿ ಎದ್ದಿರುವ ‘ಬಿಪರ್‌ಜಾಯ್’ ಚಂಡಮಾರುತದಿಂದ ಗುಜರಾತ್ ಸೇರಿದಂತೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಅಬ್ಬರದ ಮಳೆಯಾಗುತ್ತಿದೆ. ಆದರೆ ಜಿಲ್ಲೆಗೆ ವರುಣ ಕೃಪೆ ತೋರುತ್ತಿಲ್ಲ. ಪರಿಣಾಮ, ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ಬೆಳೆಗಳ ಇಳುವರಿ ಮತ್ತು ಬೆಳವಣಿಗೆಗೂ ಧಕ್ಕೆ ಉಂಟಾಗುವ ಭೀತಿ ಎದುರಾಗಿದೆ.

ಮಳೆ ಕೊರತೆಯಿಂದ ಈಗಾಗಲೇ ಬೆಳೆಗಳು ಬಾಡಲು ಶುರುವಾಗಿವೆ. ಇನ್ನು ನಾಲ್ಕೈದು ದಿನಗಳಲ್ಲಿ ಮಳೆಯಾಗದಿದ್ದರೆ ಈ ಬೆಳೆಗಳೆಲ್ಲ ಒಣಗಬಹುದು. ಇಳುವರಿಯಲ್ಲಿ ಶೇ.60ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

ಶೇ.22ರಷ್ಟು ಕೊರತೆ:
ಜಿಲ್ಲೆಯಲ್ಲಿ ಏಪ್ರಿಲ್‌ನಲ್ಲಿ ಶೇ.50ರಷ್ಟು ಕಡಿಮೆ ಮಳೆಯಾಗಿದೆ. ಇದರಿಂದ ಮುಂಗಾರು ಪೂರ್ವ ಬಿತ್ತನೆ ಕಾರ್ಯ ವಿಳಂಬವಾಗಿತ್ತು. ಆದರೆ ಮೇ ತಿಂಗಳಲ್ಲಿ ಉತ್ತಮ ಮಳೆಯಾಗಿದ್ದು, ಶೇ.35ರಷ್ಟು ಹೆಚ್ಚು ಮಳೆ ಸುರಿದಿತ್ತು. ಜೂನ್‌ನಲ್ಲಿ ಮಳೆ ಮತ್ತೆ ಕೈಕೊಟ್ಟಿದ್ದು, ಈ ತಿಂಗಳಲ್ಲಿ ಶೇ.22ರಷ್ಟು ಮಳೆ ಅಭಾವ ಉಂಟಾಗಿದೆ.
ವಾಡಿಕೆಯಂತೆ ಜೂನ್ ಮೊದಲ ವಾರದಿಂದ ಮುಂಗಾರು ಮಳೆ ಶುರುವಾಗಬೇಕಿತ್ತು. ಆದರೆ 15 ದಿನ ಕಳೆದರೂ ಮಳೆಯಾಗಿಲ್ಲ. ಇದು ಕೃಷಿಕರಲ್ಲಿ ಆತಂಕ ಉಂಟು ಮಾಡಿದ್ದು, ಮುಂಗಾರು ಪೂರ್ವದಲ್ಲಿ ಬಿತ್ತನೆ ಮಾಡಿರುವ ಬೆಳೆಗಳು ಒಣಗುವ ಸನ್ನಿವೇಶ ಸೃಷ್ಟಿಯಾಗಿದೆ. ಆರ್ಥಿಕ ನಷ್ಟದ ಭೀತಿಯಲ್ಲಿರುವ ರೈತರು ಮುಂಗಾರು ಮಳೆ ಆಗಮನವನ್ನು ಎದುರು ನೋಡುತ್ತಿದ್ದಾರೆ.

ವಾಡಿಕೆಯಷ್ಟು ಮಳೆ, ಜೂನ್‌ನಲ್ಲಿ ಕೊರತೆ:
ಜಿಲ್ಲೆಯಲ್ಲಿ ವಾರ್ಷಿಕ ವಾಡಿಕೆ ಮಳೆ 837 ಮಿಲಿ ಮೀಟರ್‌ನಷ್ಟಿದೆ. ಜೂ.7ರವರೆಗೆ ವಾಡಿಕೆಯಂತೆ 230.1 ಮಿ.ಮೀ. ಮಳೆಯಾಗಬೇಕು. ಈ ಪೈಕಿ 231.0 ಮಿ.ಮೀ.ರಷ್ಟು ಮಳೆಯಾಗಿದೆ. ವಾರ್ಷಿಕ ಲೆಕ್ಕದಲ್ಲಿ ವಾಡಿಕೆಯಷ್ಟು ಮಳೆಯಾಗಿದ್ದರೂ ಜೂನ್‌ನಲ್ಲಿ ಮಾತ್ರ ಮಳೆ ಕೊರತೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 391.06 ಮಿ.ಮೀ. ಮಳೆಯಾಗಿತ್ತು. ಮಳೆ ಅಭಾವ ಕೃಷಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಿದೆ.

ಪಿರಿಯಾಪಟ್ಟಣದಲ್ಲಿ ಕಡಿಮೆ ಮಳೆ:
ಜಿಲ್ಲೆಯ ಕೆಲ ತಾಲೂಕಿನಲ್ಲಿ ಮಳೆ ಕೊರತೆಯಾಗಿದ್ದರೆ, ಇನ್ನೂ ಕೆಲ ತಾಲೂಕಿನಲ್ಲಿ ಹೆಚ್ಚಿನ ಮಳೆಯಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಶೇ.30ರಷ್ಟು ಮಳೆ ಕೊರತೆಯಾಗಿದೆ. ಹುಣಸೂರು ತಾಲೂಕಿನಲ್ಲಿ ಶೇ.14, ಕೆ.ಆರ್.ನಗರ ತಾಲೂಕಿನಲ್ಲಿ ಶೇ.16, ಮೈಸೂರು ತಾಲೂಕಿನಲ್ಲಿ ಶೇ.5ರಷ್ಟು ಮಳೆ ಅಭಾವ ಸೃಷ್ಟಿಯಾಗಿದೆ. ಎಚ್.ಡಿ.ಕೋಟೆ ತಾಲೂಕಿನಲ್ಲಿ ಶೇ.9, ನಂಜನಗೂಡು ತಾಲೂಕಿನಲ್ಲಿ ಶೇ.14, ಸರಗೂರು ತಾಲೂಕಿನಲ್ಲಿ ಶೇ.12ರಷ್ಟು ಅಧಿಕ ಮಳೆಯಾಗಿದೆ. ತಿ.ನರಸೀಪುರ ತಾಲೂಕಿನಲ್ಲಿ ಸಮತೋಲನದಷ್ಟು ಮಳೆಯಾಗಿದೆ.


ಜಿಲ್ಲೆಯಲ್ಲಿ ಶೇ.44ರಷ್ಟು ಬಿತ್ತನೆ:
ಮೇ 2 ಮತ್ತು 3ನೇ ವಾರದಲ್ಲಿ ಸುರಿದ ಉತ್ತಮ ಮಳೆಯಿಂದ ಜಿಲ್ಲೆಯಲ್ಲಿ ಶೇ.44ರಷ್ಟು ಬಿತ್ತನೆಯಾಗಿದೆ. 3.97 ಲಕ್ಷ ಹೆಕ್ಟೇರ್ ಪೈಕಿ 1.73 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಈಗಾಗಲೇ ಬಿತ್ತನೆಯಾಗಿದೆ.

ಹತ್ತಿ ಬದಲು ಸೂರ್ಯಕಾಂತಿ
ಹತ್ತಿ ಬಿತ್ತನೆ ಪ್ರದೇಶವು ಸೂರ್ಯಕಾಂತಿ ಬೆಳೆಗೆ ಪರಿವರ್ತನೆಯಾಗಿದ್ದು, ಇದರಿಂದಾಗಿ ಸೂರ್ಯಕಾಂತಿ ಶೇ.169ರಷ್ಟು ಅಧಿಕ ಬಿತ್ತನೆಯಾಗಿದೆ. 2715 ಹೆಕ್ಟೇರ್ ಬಿತ್ತನೆ ಕ್ಷೇತ್ರ ಗುರಿಯನ್ನು ಮೀರಿ ಸೂರ್ಯಕಾಂತಿ 4590 ಹೆಕ್ಟೇರ್‌ನಷ್ಟು ಬಿತ್ತನೆ ಮಾಡಲಾಗಿದೆ. ಹತ್ತಿ ಬಿತ್ತನೆ ಪ್ರದೇಶ ಶೇ.75ಕ್ಕೆ ಇಳಿಕೆಯಾಗಿದ್ದು, 42,900 ಹೆಕ್ಟೇರ್ ಬಿತ್ತನೆ ಕ್ಷೇತ್ರ ಗುರಿಯಲ್ಲಿ 32,297 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಹತ್ತಿ ಬಿತ್ತನೆಯಾಗಿದೆ.
ಅಲಸಂದೆ 25,175 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ 23,162ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಉದ್ದು 7,879 ಹೆಕ್ಟೇರ್ ಗುರಿಗಿಂತ 9,553 ಮತ್ತು ಹೆಸರು 4860 ಹೆಕ್ಟೇರ್ ಗುರಿಗಿಂತ 6341 ಹೆಕ್ಟೆರ್ ಬಿತ್ತನೆ ಮಾಡಲಾಗಿದೆ. ಉಭಯ ಬೆಳೆಗಳು ಕ್ರಮವಾಗಿ ಶೇ.121 ಮತ್ತು ಶೇ.130ರಷ್ಟು ಬಿತ್ತನೆ ಹೆಚ್ಚಾಗಿದೆ. ಮುಸುಕಿನ ಜೋಳ 36,140 ಹೆಕ್ಟೇರ್ ಪೈಕಿ 23,399 ಹೆಕ್ಟೇರ್ ಬಿತ್ತನೆಯಾಗಿದೆ. ಇದರೊಂದಿಗೆ ಜೋಳ ಶೇ.104, ತೊಗರಿ ಶೇ.18ರಷ್ಟು, ಅವರೆ ಶೇ.7, ನೆಲಗಡಲೆ ಶೇ.6, ಎಳ್ಳು ಶೇ.24ರಷ್ಟು, ಹರಳು ಶೇ.47ರಷ್ಟು ಬಿತ್ತನೆಯಾಗಿದೆ. ಈ ಎಲ್ಲ ಬೆಳೆಗಳು ನೀರಿನ ಅಭಾವ ಎದುರಿಸುತ್ತಿವೆ. ಇವುಗಳಿಗೆ ತುರ್ತಾಗಿ ಮಳೆ ಬೇಕಾಗಿದೆ.

ಭತ್ತ ಬಿತ್ತನೆ ಆಗಿಲ್ಲ:
ಮುಂಗಾರು ಮಳೆ ವಿಳಂಬವಾಗಿರುವುದರಿಂದ ಭತ್ತ ಬಿತ್ತನೆ ಇನ್ನೂ ಆಗಿಲ್ಲ. 1.03 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಭತ್ತ ಬೆಳೆಯಲು ಗುರಿ ಹೊಂದಲಾಗಿದ್ದು, ಭೂಮಿಯನ್ನು ಹದ ಮಾಡಿಕೊಂಡಿರುವ ರೈತರು ಭತ್ತ ಬಿತ್ತನೆ ಮಾಡಲು ಸಿದ್ಧರಾಗಿದ್ದಾರೆ. ಆದರೆ ಮಳೆಯ ಸುಳಿವು ಕಾಣುತ್ತಿಲ್ಲ.
ಪ್ರಸಕ್ತ ಹಂಗಾಮಿನಲ್ಲಿ ಅತಿವೃಷ್ಟಿ ಅಥವಾ ಮಳೆಯಿಂದ 339 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬಾಳೆ, ಬೀನ್ಸ್, ಹೀರೆಕಾಯಿ, ತೆಂಗು ಇನ್ನಿತರ ಬೆಳೆಗಳು ಹಾನಿಯಾಗಿದ್ದು, 691 ರೈತರು ನಷ್ಟಕ್ಕೆ ಒಳಗಾಗಿದ್ದಾರೆ. ಸಕಾಲಕ್ಕೆ ಮಳೆ ಬಾರದಿದ್ದರೆ ನಷ್ಟ ಮತ್ತು ಹಾನಿಗೆ ಒಳಗಾದ ರೈತರ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ.

ಕುಡಿಯುವುದಕ್ಕೆ ಮಾತ್ರ ಬಳಕೆ
ಮಳೆಯ ಕೊರತೆಯಿಂದ ಒಣಗುತ್ತಿರುವ ಬೆಳೆಗಳಿಗೆ ನಾಲೆಗಳಿಂದ ನೀರು ಪೂರೈಸಲು ರೈತರು ಆಗ್ರಹಿಸಿದ್ದಾರೆ. ಆದರೆ, ಜಲಾಶಯದಲ್ಲೂ ನೀರಿನ ಸಂಗ್ರಹ ಕಡಿಮೆಯಾಗಿದೆ. ಕುಡಿಯುವುದಕ್ಕೆ ಮಾತ್ರ ನೀರನ್ನು ಮೀಸಲಿಟ್ಟಿದ್ದು, ಬೆಳೆಗಳಿಗೆ ನೀಡಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯ ಕಬಿನಿ ಜಲಾಶಯದಲ್ಲಿ 4.13, ನುಗು ಜಲಾಶಯದಲ್ಲಿ 2.52 ಮತ್ತು ತಾರಕ ಜಲಾಶಯದಲ್ಲಿ 2.28 ಸೇರಿದಂತೆ 8.93 ಟಿ.ಎಂ.ಸಿ. ನೀರು ಸಂಗ್ರಹವಿದೆ. ಡೆಡ್ ಸ್ಟೋರೆಜ್ ಹೊರತುಪಡಿಸಿದರೆ 2 ರಿಂದ 3 ಟಿಎಂಸಿ ನೀರು ಲಭ್ಯವಿದ್ದು, ಇದನ್ನು ಕುಡಿಯುವ ನೀರಿಗೆ ಬಳಕೆ ಮಾಡಲು ಉದ್ದೇಶಿಸಲಾಗಿದೆ. ಹೀಗಾಗಿ, ಬೆಳೆಗಳಿಗೆ ನೀರು ಕೊಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಸಕಾಲದಲ್ಲಿ ಮುಂಗಾರು ಮಳೆ ಬೀಳದ ಪರಿಣಾಮ ಬೆಳೆಗಳು ಒಣಗಲು ಶುರುವಾಗಿವೆ. ನಾಲ್ಕೈದು ದಿನಗಳಲ್ಲಿ ಮಳೆ ಬಾರದಿದ್ದರೆ ಬೆಳೆಗಳ ಬೆಳವಣಿಗೆ ಮತ್ತು ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ.
ಚಂದ್ರಶೇಖರ್, ಜಂಟಿ ಕೃಷಿ ನಿರ್ದೇಶಕ,