ಜಿಲ್ಲೆ

ಕೃತಿಗಳ ಸಾಂಸ್ಕೃತಿಕ-ಸಾಹಿತ್ಯಿಕ ಅಧ್ಯಯನ ಅಗತ್ಯ

ಧಾರವಾಡ: ವೈಜ್ಞಾನಿಕ ತಳಹದಿ ಮೇಲೆ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಅಧ್ಯಯನ ಕೈಗೊಳ್ಳುವುದು ಅವಶ್ಯವಿದೆ. ಇದು ನಾಡಿನ ಪರಂಪರೆ ಅರಿತುಕೊಂಡು ಸರಳವಾದ ಜೀವನ ಶೈಲಿಗೆ ಸುಗಮ ಹಾದಿ ಕಲ್ಪಿಸುತ್ತದೆ ಎಂದು ಸಾಹಿತಿ ಡಾ. ರಾಜೇಶ್ವರಿ ಮಹೇಶ್ವರಯ್ಯ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಮದಗ ಮಾಸೂರ ಕೆಂಚಮ್ಮ’ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಜಿನದತ್ತ ಹಡಗಲಿ ನಾಟಕ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಸಮಾಜದಲ್ಲಿ ಪ್ರತಿಯೊಬ್ಬರಲ್ಲೂ ಪರಸ್ಪರ ಸೌಹಾರ್ದಯುತ ಮನೋಭಾವನೆ ಗಟ್ಟಿಗೊಳ್ಳಲು ರಂಗಭೂಮಿ ತನ್ನದೇ ಆದ ಪ್ರಭಾವ ಬೀರಿದೆ. ಕಲ್ಮಶ ಮನೋಭಾವನೆ ತೊಡೆದುಹಾಕಿ ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಲು ಇದು ಮಹತ್ತರ ಪಾತ್ರ ವಹಿಸುತ್ತದೆ ಎಂದರು.

ಡಾ. ಜೆ.ಎಂ. ಚಂದೂನವರ ಮಾತನಾಡಿದರು. ಪ್ರೊ. ಸೋಮಣ್ಣ ಕುಂದರಗಿ ಕೃತಿ ಪರಿಚಯಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಮಾತನಾಡಿದರು.

ಬಸವರಾಜ ಬೆಟಗೇರಿ, ಮಡಿವಾಳಪ್ಪ ಗಾಂಜಿ, ನಿಂಗಪ್ಪ ಬಡಿಗೇರ, ಭೀಮಪ್ಪ ಬಸರಿಕೊಪ್ಪ, ಉಮೇಶ ಗಾಂಜಿ, ಶಿವಾನಂದ ಟವಳಿ, ಪ್ರೊ. ಚಂದ್ರಶೇಖರ ಕುಂಬಾರ, ಸಾವಮ್ಮ ಕಣವಿ, ಸಿ.ಎಂ. ಕೆಂಗಾರ, ಬಸವರಾಜ ಗೊರವರ, ಜಿ.ಟಿ. ದೊಡಮನಿ, ದ್ಯಾಮವ್ವ ಬೆಟಿಗೇರಿ, ಹನಮವ್ವ ರೇವಡಿಹಾಳ, ಶಾಂತವ್ವ ಗೋಕುಲ, ವಿದ್ಯಾ ಬೆಟಗೇರಿ, ಸರೋಜಾ ಛಬ್ಬಿ, ಯಲ್ಲಮ್ಮ ಪಾಟೀಲ, ಇತರರು ಇದ್ದರು. ತಾಲೂಕು ಕಸಾಪ ಅಧ್ಯಕ್ಷ ಎಫ್.ಬಿ. ಕಣವಿ ಸ್ವಾಗತಿಸಿದರು. ಕವಿವಿ ಡೆಪ್ಯುಟಿ ರಜಿಸ್ಟ್ರಾರ್ ಮಂಜುನಾಥ ಛಬ್ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾಂತೇಶ ನರೇಗಲ್ ನಿರೂಪಿಸಿದರು. ಮಂಜುನಾಥ ದೊಡಮನಿ ವಂದಿಸಿದರು.