ಮೈಸೂರು: ಶಾಲಾ- ಕಾಲೇಜುಗಳ ಗ್ರಂಥಾಲಯಗಳಲ್ಲಿ ಬುಕ್ ಟಾಕ್ ಆಯೋಜಿಸುವ ಮೂಲಕ ಮಕ್ಕಳಲ್ಲಿ ಪುಸ್ತಕ ಓದುವ ಬಗ್ಗೆ ಆಸಕ್ತಿ ಬೆಳೆಸಬೇಕಿದೆ ಎಂದು ವಿಜಯವಿಠಲ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಸತ್ಯಪ್ರಸಾದ್ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ಸರಸ್ವತಿಪುರಂ ವಿಜಯವಿಠ್ಠಲ ಪಿಯು ಕಾಲೇಜು ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಎಸ್.ಎಲ್.ವರಲಕ್ಷ್ಮೀ ಮಂಜುನಾಥ್ ಅವರ ಮೂರು ಕೃತಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪುಸ್ತಕ ಸಂಸ್ಕೃತಿಯನ್ನು ಯುವ ಜನರಲ್ಲಿ ಬೆಳೆಸಬೇಕು. ಜತೆಗೆ, ಎಲ್ಲ ಭಾಷೆಗಳು ಗೊತ್ತಿರಬೇಕು. ಆದರೆ ಕನ್ನಡ ಹೃದಯಕ್ಕೆ ಹತ್ತಿರವಾಗಿರಬೇಕು. ಕೃತಿಗಳ ಮೂಲಕ ಕವಿಗಳು ಸದಾ ಜೀವಂತವಾಗಿರುತ್ತಾರೆ. ಕವಿಗಳಿಗೆ ಸಾವಿಲ್ಲ ಎಂದರು.
ವರಲಕ್ಷ್ಮೀ ಮಂಜುನಾಥ್ ಅವರು ಗದ್ಯ ಹಾಗೂ ಪದ್ಯ ಎರಡಲ್ಲೂ ಸಾಹಿತ್ಯ ರಚಿಸಿದ್ದಾರೆ. ಅವರ ಕವನಗಳಲ್ಲಿ ನವರಸ ಇದೆ. ಹಾಸ್ಯ ಸ್ಥಾಯಿಭಾವ ಆದಲ್ಲಿ ಕವಿ ಪ್ರಸ್ತುತವಾಗುತ್ತಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್, ಮಹಾ ಸಂತ ಸ್ವಾಮಿ ವಿವೇಕಾನಂದ ಸೇರಿದಂತೆ ಹಲವು ಮಹನೀಯರ ಜೀವನ ದರ್ಶನವನ್ನು ಒಂದು ಪುಟದಲ್ಲಿ ಕಟ್ಟಿಕೊಟ್ಟಿದ್ದಾರೆ. ಶಿಕ್ಷಣ, ಆರೋಗ್ಯ, ಪರಿಸರ ಸೇರಿದಂತೆ ಬೇರೆ ಬೇರೆ ವಿಷಯಗಳ ಕುರಿತು ಸಾಮಾಜಿಕ ಕಾಳಜಿಯಿಂದಲೇ ಬರೆದಿದ್ದಾರೆ ಎಂದರು.
ನಂಜನಗೂಡು ಜೆಎಸ್‌ಎಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕೊತ್ತಲವಾಡಿ ಶಿವಕುಮಾರ್ ಮಾತನಾಡಿ, ಜನಪ್ರಿಯತೆಗಿಂತ ಜನಮನ್ನಣೆ ಪಡೆಯುವುದು ಮುಖ್ಯ. ಏಕೆಂದರೆ ಜನಪ್ರಿಯತೆ ಹೋಗುತ್ತದೆ. ಆದರೆ, ಜನಮನ್ನಣೆ ಉಳಿಯುತ್ತದೆ ಎಂದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಸಂಪರ್ಕ ಹಾಗೂ ಶ್ರೀಗಂಧ ವಲಯ ಪ್ರಮುಖ ಡಾ.ವಿ. ರಂಗನಾಥ್ ಮಾತನಾಡಿ, ಪರಿಷತ್ ಮೂಲಕ 13 ಕೇಂದ್ರಗಳಲ್ಲಿ ಪ್ರತಿ ತಿಂಗಳು ಸಾಹಿತ್ಯ ಕಾರ್ಯಕ್ರಮ ಸಂಘಟಿಸುತ್ತಿದ್ದು, ಸಾಹಿತ್ಯವನ್ನು ಓದುಗರ ಬಳಿಗೆ ತೆಗೆದುಕೊಂಡು ಹೋಗುವುದು ನಮ್ಮ ಉದ್ದೇಶ ಎಂದರು.
ತಗಡೂರು ಗೋಪಿನಾಥ್ ಮಾತನಾಡಿ, ಮುಂಬರುವ ದಿನಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ಸಾಹಿತ್ಯಿಕ ಕಾರ್ಯಕ್ರಮ ನಡೆಸಲಾಗುವುದು ಎಂದರು.
ಲೇಖಕಿ ವರಲಕ್ಷ್ಮೀ ಮಂಜುನಾಥ್ ಮಾತನಾಡಿ, ಪ್ರತಿಯೊಬ್ಬರೂ ಪುಸ್ತಕ ಓದುವ ಹವ್ಯಾಸ ಮೈಗೂಡಿಸಿಕೊಳ್ಳಬೇಕು ಎಂದರು.
ಅಖಿಲ ಭಾರತ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಸುಬ್ರಹ್ಮಣ್ಯ ಮಾತನಾಡಿ, ವರಲಕ್ಷ್ಮೀ ಅವರ ಕೃತಿಗಳಲ್ಲಿ ಸೃಜನಶೀಲತೆ, ಸೂಕ್ಷ್ಮ ಸಂವೇದನೆ ಎದ್ದು ಕಾಣಿಸುತ್ತದೆ ಎಂದರು.
‘ಭಾವ ಶರಧಿ’ ಕವನ ಸಂಕಲನ, ವಿಚಾರ ಮಂಜರಿ- ವ್ಯಕ್ತಿ- ವಿಚಾರ- ಸಂಸ್ಕೃತಿ ಕುರಿತ ಲೇಖನಗಳ ಸಂಕಲನ, ಜೀವನರಾಗ- ಕಥಾ ಸಂಕಲನವನ್ನು ಬಿಡುಗಡೆಗೊಳಿಸಲಾಯಿತು.
ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಎಂ.ಎ. ಮಂಜುನಾಥ್, ಅಖಿಲ ಭಾರತೀಯ ಸಾಹಿತ್ಯ ಪರಿಷದ್ ನಂಜನಗೂಡು ತಾಲೂಕು ಘಟಕದ ಅಧ್ಯಕ್ಷ ನಂಜನಗೂಡು ಸತ್ಯನಾರಾಯಣ ಇನ್ನಿತರರಿದ್ದರು.