ಮದ್ದೂರು ತಾಲೂಕಿನ ಯರಗನಹಳ್ಳಿ ಆಯೋಜಿಸಿದ್ದ ಜನ ಸಂಪರ್ಕ ಸಭೆಯಲ್ಲಿ ಶಾಸಕ ಡಿ.ಸಿ.ತಮ್ಮಣ್ಣ ಮಾತನಾಡಿದರು. ಮಾದನಾಯಕಯಳ್ಳಿ ರಾಜಣ್ಣ, ಬಿಳಿಯಪ್ಪ, ಶಿವರಾಮ್, ನಾಗೇಶ್ ಇದ್ದರು. 
ಜಿಲ್ಲೆ

ಕೃತಜ್ಞತೆ ಸಲ್ಲಿಸದ ಜಿಲ್ಲೆಯ ಜನತೆ

ಮದ್ದೂರು:  ಜೆಡಿಎಸ್- ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆ ಅಭಿವೃದ್ಧಿಗೆ 8000 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯ ಜನರು ಮೈತ್ರಿ ಅಭ್ಯರ್ಥಿ ವಿಚಾರದಲ್ಲಿ ಕೃತಜ್ಞತೆ ಸಲ್ಲಿಸಲಿಲ್ಲ ಎಂದು ಶಾಸಕ ಡಿ.ಸಿ. ತಮ್ಮಣ್ಣ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಕೆಸ್ತೂರು ಜಿಪಂ ಕ್ಷೇತ್ರ ವ್ಯಾಪ್ತಿಯ ಹೆಮ್ಮನಹಳ್ಳಿ, ಯರಗನಹಳ್ಳಿ, ಹನುಮಂತಪುರ, ಚಿನ್ನನದೊಡ್ಡಿ, ಮಾರದೇವನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಜನ ಸಂಪರ್ಕ ಸಭೆಯಲ್ಲಿ ಮಾತನಾಡಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿ ನಿಖಿಲ್‌ಕುಮಾರ್ ಸ್ವಾಮಿ ಅವರನ್ನು ಬೆಂಬಲಿಸುವ ಮೂಲಕ ಮತದಾರರು ಕುಮಾರಸ್ವಾಮಿಗೆ ಕೃತಜ್ಞತೆ ಸಲ್ಲಿಸಬೇಕಿತ್ತು ಎಂದು ಜಿಲ್ಲೆಯ ಜನರ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡ್ಯ ಜಿಲ್ಲೆಯನ್ನು ಎಂದೂ ಕಡೆಗಣಿಸಿಲ್ಲ. ಅಧಿಕಾರಕ್ಕೆ ಬಂದಾಗಲೆಲ್ಲ ಜಿಲ್ಲೆಯ ಅಭಿವೃದ್ಧಿಗಾಗಿ ನೂರಾರು ಕೋಟಿ ಅನುದಾನ ನೀಡುತ್ತಾ ಬಂದಿದ್ದಾರೆ. ಜಿಲ್ಲೆ ಅಭಿವೃದ್ಧಿ ಹೊಂದಿರುವುದರಲ್ಲಿ ಜೆಡಿಎಸ್ ಕೊಡುಗೆ ಅನನ್ಯವಾಗಿದೆ. ಇದನ್ನು ಮತದಾರರು ಅರ್ಥೈಸಿಕೊಳ್ಳಬೇಕು ಎಂದು ಮನವಿ ನೀಡಿದರು.

ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಳಿಯಪ್ಪ, ಪುರಸಭಾ ಅಧ್ಯಕ್ಷ ಸುರೇಶ್‌ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್, ಗ್ರಾಪಂ ಅಧ್ಯಕ್ಷ ರವಿ, ಮಾಜಿ ಅಧ್ಯಕ್ಷರಾದ ನಾಗೇಶ್, ಉಮೇಶ್, ಮಧು, ಶ್ಯಾಂ ಪ್ರಸಾದ್, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಕದಲಿಪುರ ಶಿವರಾಮ್, ರಾಮಕೃಷ್ಣಯ್ಯ, ಚೆನ್ನಯ್ಯ, ಚಂದ್ರು, ಉಪ ತಹಸೀಲ್ದಾರ್ ರಾಘವೇಂದ್ರ, ಪಿಡಿಒ ಲೀಲಾವತಿ ಇದ್ದರು.