ಜಿಲ್ಲೆ

ಕೃತಜ್ಞತೆ ಭಾವ, ಧರ್ಮವನ್ನು ಅರಿಯಿರಿ

ಕೃತಜ್ಞತೆ ಮತ್ತು ಧರ್ಮವನ್ನು ಅರಿತರೆ ಜೀವನ ಆನಂದಮಯವಾಗಿರುತ್ತದೆ. ಈ ಜಗತ್ತು ನಮಗೆ ಎಲ್ಲವನ್ನೂ ನೀಡಿದೆ. ಆದ್ದರಿಂದ ಈ ಜಗತ್ತಿಗೆ ನಾವು ಕೃತಜ್ಞತಾ ಸಮರ್ಪಣೆ ಮಾಡಬೇಕು. ಸಣ್ಣ ಸಣ್ಣ ವಸ್ತುಗಳೂ ಈ ಜಗತ್ತಿನಲ್ಲಿ ಕೆಲಸ ಮಾಡುತ್ತಿವೆ. ಜಗತ್ತಿ್ತಲ್ಲಿ ಕರ್ತಾರನ ಕಮ್ಮಟ ನಡೆಯುತ್ತಿದೆ ಎಂದರೆ ದೇವರ ಕೆಲಸ ನಡೆಯುತ್ತಿದೆ.

ಜಗತ್ತನ್ನು ನಾವು ನೋಡಬೇಕು, ಅನುಭವಿಸಬೇಕು ವಿನಃ ಹಣ ಗಳಿಸುವುದರಲ್ಲಿ, ಹಣ ಎಣಿಸುವುದರಲ್ಲಿ ಸಮಯ ತೆಗೆಯುವುದಲ್ಲ. ನಾವು ಒಂದು ಬೊಗಸೆ ನೀರು ಕುಡಿದರೆ ಆ ಕೆರೆಗೆ ಧನ್ಯವಾದ ಸಲ್ಲಿಸಬೇಕು ಎಂದು ಚೀನಾ ದೇಶದ ಶರಣರು ಹೇಳುತ್ತಾರೆ. ರವೀಂದ್ರನಾಥ ಠಾಗೋರ್ ಅವರು, ನೂರು ವರ್ಷ ಬದುಕಲು ಅವಕಾಶ ನೀಡಿದ ಮತ್ತು ವೈವಿಧ್ಯತೆ ತುಂಬಿದ ಸುಂದರವಾದ ಜಗತ್ತನ್ನು ನೀಡಿದ ಆ ಸೃಷ್ಟಿ ಕರ್ತನಿಗೆ ಧನ್ಯವಾದಗಳು ಅಂದರು. ಒಂದು ಗ್ಲಾಸ್ ನೀರು ನೀಡಿದವರಿಗೆ ನಾವು ಧನ್ಯವಾದ ಹೇಳುತ್ತೇವೆ. ಜಗತ್ತಿಗೆ ನೀರು ಉಣಿಸುವ ಮಳೆರಾಯನಿಗೆ ಧನ್ಯವಾದಗಳನ್ನು ಹೇಳು ಮನುಷ್ಯನೆ. ಈ ಸುಂದರವಾದ ಜಗತ್ತು ನೀಡಿದ ಮೇಲೆ ನಾವೇಕೆ ದುಃಖದಿಂದ ಬದುಕಬೇಕು? ಎಲ್ಲವನ್ನೂ ಈ ಜಗತ್ತು ನೀಡಿದೆ.

ಕೆಲವರು ಜಗತ್ತು ಬಹಳ ಕೆಟ್ಟಿದೆ ಎಂದು ಮಾತನಾಡುತ್ತಾರೆ. ಜಗತ್ತಿನಲ್ಲಿ ಸೂರ್ಯ, ಚಂದ್ರ, ಗಾಳಿ, ನಕ್ಷತ್ರ, ನೀರು ಏನು ಕೆಟ್ಟಿದೆ ಹೇಳು ಮನುಷ್ಯನೇ? ಕೆಟ್ಟಿರುವದು ನಿನ್ನ ಮನಸು, ನೋಡುವ ದೃಷ್ಟಿ, ನಿನ್ನ ವಿಚಾರಗಳೇ ವಿನಃ ಜಗತ್ತು ಅಲ್ಲ. ನಿಮ್ಮ ಮನೆಯ ಮುಂದೆ ನಾಲ್ಕು ತೋರಣ ಕಟ್ಟಿದರೆ ಹಬ್ಬ ಎನ್ನುತ್ತೇವೆ. ಜಗತ್ತಿಗೆ ಸುಂದರ ತೋರಣ ಕಟ್ಟಿದ ಸೃಷ್ಟಿ ಕರ್ತ ನಮಗೆ ಸದಾ ಹಬ್ಬವನ್ನು ಆಚರಿಸುವ ಅವಕಾಶ ಕೊಟ್ಟಿದ್ದಾನೆ. ಜಗತ್ತನ್ನು ನೋಡಿ ಸಂತೋಷ ಪಡು. ಅವನಿಗೆ ಧನ್ಯವಾದಗಳನ್ನು ಹೇಳು ಮನುಷ್ಯನೆ. ಧರ್ಮದಿಂದ ಬದಕಬೇಕು. ನಾನು ನೀವು ಎಲ್ಲರೂ ಕೂಡಿ ಸಂತೋಷದಿಂದ ಇರಬೇಕು ಅಂತ ವಿಚಾರ ಮಾಡಬೇಕು. ಅದು ಧರ್ಮ.

ಮನೆಯ ಜನರನ್ನು ಆನಂದದಿಂದ ಇಡುವುದೇ ಧರ್ಮ. ಆನಂದ ಹಾಳು ಮಾಡುವುದೇ ಅಧರ್ಮ. ದೇವರು ಇಷ್ಟೆಲ್ಲ ನೀಡಿದ್ದಾನೆ. ಜಗತ್ತಿಗೆ ಧನ್ಯವಾದಗಳನ್ನು ಹೇಳು, ಅದು ಧರ್ಮ. ನಾನು ಸ್ವಾತಂತ್ರ್ಯ ಗಳಿಸಿದ್ದೇನೆ, ಒಬ್ಬನೇ ಬದಕುತ್ತೇನೆ ಎಂದು ಹೇಳುವವರಿದ್ದಾರೆ. ಒಂದು ವೇಳೆ ಗಾಳಿ ಒಂದು ಕ್ಷಣ ಸರಿದರೆ ಏನಾಗಬಹುದು ಹೇಳಿ? ಅವನು ಸ್ವತಂತ್ರವಾಗಿರುತ್ತಾನೆಯೆ? ನಮ್ಮ ಸಲುವಾಗಿ ಗಾಳಿ, ಬೆಳಕು, ನೀರು, ಭೂಮಿ ಎಲ್ಲವೂ ದುಡಿಯುತ್ತವೆ. ಅವಕ್ಕೆ ಧನ್ಯವಾದಗಳನ್ನು ಹೇಳಿ. ಮನುಷ್ಯನೇ, ನೀನು ಗಳಿಸಿರುವ ಆಸ್ತಿ ಒಂದು ಕಡೆ ಇಡು. ಒಂದು ದಿನ ನೀರು, ಗಾಳಿ ಇಲ್ಲದೆ ಬದುಕಲು ಸಾಧ್ಯವೇ? ಇಂತಹ ಧರ್ಮದ ಕೆಲಸವನ್ನು ಜಗತ್ತೇ ಮಾಡುತ್ತಿರುವಾಗ ನೀನೇಕೆ ಧರ್ಮದ ಕೆಲಸ ಮಾಡಬಾರದು?

ನಾವು ಜಗತ್ತಿನ ಮೇಲೆ ಅವಲಿಂಬಿತರು. ಅದು ಪರಮ ಸತ್ಯ. ಸತ್ಯವೇ ದೇವರು, ಧರ್ಮ. ಧರ್ಮದಿಂದ ಬದುಕಿದರೆ ಆನಂದದಿಂದ ಬದುಕಬಹುದು. ಮನುಷ್ಯನೇ, ದೇವರೇ ನಮ್ಮ ಸಲುವಾಗಿ ದುಡಿಯುವಾಗ ನಾವು ಈ ಶರೀರ ಇರುವವರೆಗೆ ಧರ್ಮದಿಂದ ದುಡಿಯಬೇಕು. ನಿಮ್ಮ ಮನೆ ಹಾಗೂ ಬಂಧುಗಳನ್ನು ಸತ್ಕರಿಸಬೇಕು. ಅದೇ ಧರ್ಮ, ಅದೇ ಸತ್ಯ. ನಿರೂಪಣೆ: ತುಕಾರಾಂ ಬ. ಜಾಧವ, ಕನಕೂರ