ನಿಪ್ಪಾಣಿ, ಬೆಳಗಾವಿ: ಭಾರತ ಸೇರಿ ಜಗತ್ತಿನಾದ್ಯಂತ ಇಂಜಿನಿಯರಿಂಗ್‌ನ ಕೃತಕ ಬುದ್ಧಿಮತ್ತೆ ಮತ್ತು ಯಂತ್ರಕಲಿಕೆ (ಎಐಎಂಎಲ್) ವಿಭಾಗಕ್ಕೆ ಭಾರಿ ಬೇಡಿಕೆ ಇದೆ. ದೇಶದ ಆರ್ಥಿಕತೆಯಲ್ಲಿ ಬದಲಾವಣೆ ತರುವ ಸಾಮರ್ಥ್ಯ ಕೃತಕ ಬುದ್ಧಿಮತ್ತೆಯಲ್ಲಿದೆ ಎಂದು ಸ್ಥಳೀಯ ವಿದ್ಯಾ ಸಂವರ್ಧಕ ಮಂಡಳದ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಅಭಿಪ್ರಾಯಪಟ್ಟರು.
ಮಾಜಿ ರಾಷ್ಟ್ರಪತಿ ಡಾ.ಅಬುಲ್ ಕಲಾಂ ಆಜಾದ್ ಜನ್ಮದಿನದ ಅಂಗವಾಗಿ ಸ್ಥಳೀಯ ವಿಎಸ್‌ಎಂ ಸೋಮಶೇಖರ ಆರ್. ಕೋಠಿವಾಲೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ಸ್ ವಿಭಾಗದ ವಿದ್ಯಾರ್ಥಿಗಳ ಸಂಘ ಉದ್ಘಾಟನೆ ಮತ್ತು ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ(ಎಐಎಂಎಲ್) ಕುರಿತು ವಿದ್ಯಾರ್ಥಿಗಳೊಂದಿಗೆ ಚರ್ಚಾಕೂಟ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೃಷಿ, ಶಿಕ್ಷಣ, ಆರೋಗ್ಯ, ಸಾರಿಗೆ, ಬ್ಯಾಂಕಿಂಗ್, ಸೈಬರ್ ಭದ್ರತೆ, ಉತ್ಪಾದನೆ, ಮನರಂಜನೆ ಸೇರಿ ಎಲ್ಲ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಬಳಸಲಾಗುತ್ತಿದೆ. ಈ ವಿಭಾಗವನ್ನು ನಮ್ಮ ಮಹಾವಿದ್ಯಾಲಯದಲ್ಲಿ ಪ್ರಾರಂಭಿಸಿ ಎಲ್ಲ ಸೌಲಭ್ಯ ಒದಗಿಸಲಾಗಿದೆ. ವಿದ್ಯಾರ್ಥಿಗಳು ಲಾಭ ಪಡೆದು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ವಿಎಸ್‌ಎಂಎಸ್‌ಆರ್‌ಕೆಐಟಿ ಪ್ರಾಚಾರ್ಯ ಡಾ.ಉಮೇಶ ಪಾಟೀಲ ಮಾತನಾಡಿ, ಕೃತಕ ಬುದ್ಧಿಮತ್ತೆ ಕೇವಲ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸೀಮಿತವಾಗದೆ ಸಮಾಜದ ಎಲ್ಲ ಜನರಲ್ಲೂ ಆಸಕ್ತಿ ಹುಟ್ಟಿಸಿದೆ ಎಂದರು.
ಬೆಳಗಾವಿಯ ಎಡ್ಜೆಟೆಕ್ ಎಲ್‌ಎಲ್‌ಪಿ ಕಂಪನಿ ಸಂಸ್ಥಾಪಕಿ ಚೇತನಾ ಸಾರಂಗ ಮಾತನಾಡಿ, ಗಣಕಯಂತ್ರಗಳು ಅಗಾಧವಾದ ಪ್ರಗತಿ ಸಾಧಿಸಿರುವುದರಿಂದ ಕೃತಕ ಬುದ್ಧಿಮತ್ತೆ ಸಂಶೋಧನೆಗಳು ದಾಪುಗಾಲು ಹಾಕುತ್ತಿವೆ ಎಂದರು.
ಮಂಡಳದ ಉಪಕಾರ್ಯಾಧ್ಯಕ್ಷ ಆರ್.ವೈ. ಪಾಟೀಲ, ನಿರ್ದೇಶಕ ಸಮೀರ್ ಬಾಗೇವಾಡಿ, ವಿನಾಯಕ ಢೋಲೆ, ಅವಿನಾಶ ಪಾಟೀಲ, ಡೀನ್ ಅಕಾಡೆಮಿಕ್ ಡಾ.ಮಲ್ಲಿಕಾರ್ಜುನ ಸರ್ಸಾಂಬಾ, ಡೀನ್(ಕಾರ್ಪೋರೇಟ್ ರಿಲೇಶನ್ಸ್) ಡಾ. ಸುನೀಲ ಸಂಗೊಳ್ಳಿ, ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯೂನಿಕೇಶನ್ಸ್ ವಿಭಾಗದ ಮುಖ್ಯಸ್ಥೆ ಆರತಿ ಸುಧಾಕರ, ಸಂಯೋಜಕಿ ಕವಿತಾ ವಸೇದಾರ, ಪ್ರೊ.ಸಂತೋಷ ಕೋಳಕಿ, ಪ್ರೊ.ಪ್ರಶಾಂತ ಹೆಬ್ಬಾಳೆ, ಸಾಗರ ಬಿರ್ಜೆ, ಮಲ್ಲಿಕಾರ್ಜುನ ವಾಡೇಕರ, ರೋಹನ ಸುಬ್ಬನ್ನವರ ಇತರರಿದ್ದರು.