ಮೈಸೂರು: ಕೂಲಿ ಹೆಚ್ಚಳಕ್ಕೆ ಆಗ್ರಹಿಸಿ ಹಮಾಲಿ ಕಾರ್ಮಿಕರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಶ್ರಮಿಕ ಶಕ್ತಿ ಸಂಘ, ರಾಜ್ಯ ಲೋಡಿಂಗ್ ಆ್ಯಂಡ್ ಅನ್‌ಲೋಡಿಂಗ್ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಪ್ರತಿಭಟನಾಕಾರರು, ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿಗೆ ವರೆಗೆ ರ‌್ಯಾಲಿ ನಡೆಸಿದರು. ಬಳಿಕ ಡಿಸಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ಅನ್ನಭಾಗ್ಯ ಯೋಜನೆಯಡಿ ಆಹಾರ ನಿಗಮದ ಕೆಎಫ್‌ಸಿಎಸ್‌ಸಿ ಮತ್ತು ಟಿಎಪಿಸಿಎಂಎಸ್ ಗೋದಾಮುಗಳಲ್ಲಿ ಆಹಾರ ಧಾನ್ಯಗಳ ಎತ್ತುವಳಿ ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸವನ್ನು ಸಾವಿರಾರು ಹಮಾಲಿ ಕಾರ್ಮಿಕರು ಹತ್ತಾರು ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಗ್ರಾಮಾಂತರ ಚಿಲ್ಲರೆ ಸಾಗಾಣಿಕೆ ಗುತ್ತಿಗೆದಾರರು ಕಡಿಮೆ ಸಂಬಳ ತೋರಿಸಿ ಇಎಸ್‌ಐ ಮತ್ತು ಪಿಎಫ್ ಸೌಲಭ್ಯದಿಂದ ವಂಚಿಸಲಾಗಿದೆ. ಈ ಕುರಿತು ಕ್ರಿಮಿನಲ್ ಪ್ರಕರಣ ದಾಖಲಿಸಿಬೇಕು ಎಂದು ಆಗ್ರಹಿಸಿದರು.
ಲೋಡಿಂಗ್ ಮತ್ತು ಅನ್‌ಲೋಡಿಂಗ್ ಕೆಲಸಕ್ಕೆ ಕೂಲಿ ದರ ನಿಗದಿಪಡಿಸಬೇಕು. 2018ರಲ್ಲಿ ಪ್ರತಿ ಕ್ವಿಂಟಾಲ್‌ಗೆ 16 ರೂ. ನಿಗದಿ ಮಾಡಲಾಗಿತ್ತು. ನಾಲ್ಕು ವರ್ಷದಲ್ಲಿ ಶೇ. 300ರಷ್ಟು ತುಟ್ಟಿ ಭತ್ಯೆ ಹೆಚ್ಚಾಗಿದೆ. ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ಕೆಲಸಕ್ಕೆ ಕನಿಷ್ಠ ಕ್ವಿಂಟಾಲ್‌ಗೆ 26 ರೂ. ನಿಗದಿ ಪಡಿಸಬೇಕು. ಸಗಟು, ಚಿಲ್ಲರೆ ಸಾಗಣೆ ಎಲ್ಲ ಗುತ್ತಿಗೆದಾರರು ಗುತ್ತಿಗೆ ಕಾರ್ಮಿಕರ ಕಾಯ್ದೆಯಡಿ ಕಾರ್ಮಿಕರಿಗೆ ನೀಡಬೇಕಾದ ಸಂಬಳ, ಇಎಸ್‌ಐ, ಪಿಎಫ್ ವಂತಿಕೆ ಪಾವತಿಸಿರುವ ರಸೀದಿ ಪ್ರತಿ ತಿಂಗಳು ಕೊಡಿಸಲು ಕ್ರಮ ವಹಿಸಬೇಕು. ಬಾಕಿ ಉಳಿಸಿಕೊಂಡಿರುವ ಇಎಸ್‌ಐ, ಪಿಎಫ್ ವಂತಿಕೆಯನ್ನು ಪಾವತಿಸಬೇಕು. ಅಲ್ಲಿವರೆಗೆ ಗುತ್ತಿಗೆದಾರರ ಬಿಲ್ ತಡೆಹಿಡಿಯಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ವರದರಾಜೇಂದ್ರ, ಕರಿನಾಯಕ, ನರಸಿಂಹಮೂರ್ತಿ, ಜಿ.ಮಹದೇವ, ಡಿ.ಸಿದ್ದರಾಜು, ಡಿ.ಚಲುವರಾಜು, ದೇವರಾಜು, ಎಂ.ಮಹದೇವಸ್ವಾಮಿ, ಬಸವಲಿಂಗೂ, ಈರಣ್ಣ, ತಮ್ಮಯ್ಯ, ರಮೇಶ್, ನಾಗರಾಜು, ಲೋಕೇಶ್ ಇನ್ನಿತರರು ಇದ್ದರು