ಜಿಲ್ಲೆ

ಕೂಲಿ ಕಾರ್ಮಿಕರಿಗೆ ಹೆಚ್ಚಾದ ಬೇಡಿಕೆ

ಚಿಕ್ಕಬಳ್ಳಾಪುರ : ಜಿಲ್ಲೆಯಲ್ಲಿ ಉತ್ತಮ ಮಳೆಗೆ ಕೃಷಿ ಚಟುವಟಿಕೆ ಬಿರುಸುಗೊಳ್ಳುತ್ತಿದ್ದಂತೆ ಸಹಜವಾಗಿ ಕೂಲಿ ಕಾರ್ಮಿಕರಿಗೂ ಬೇಡಿಕೆ ಹೆಚ್ಚಾಗಿದೆ.

ಮುಂಗಾರು ಅವಧಿಯಲ್ಲಿ ಉಳುಮೆ, ಬಿತ್ತನೆ ಬೀಜ, ಬಿತ್ತನೆ ಕಾರ್ಯ, ರಸಗೊಬ್ಬರ ಮತ್ತು ಕೀಟನಾಶಕ ಸಿಂಪಡಣೆ ಸೇರಿ ಹಲವು ಪ್ರಕ್ರಿಯೆಗಳು ನಡೆಯುತ್ತಿವೆ. ಇದರ ಜತೆಗೆ ದ್ರಾಕ್ಷಿ ಕಟಾವು, ಹೂವು ಕೀಳುವಿಕೆ ಸೇರಿ ತೋಟಗಾರಿಕೆ ಕೆಲಸಗಳು ಬಿರುಸಿನಿಂದ ಸಾಗುತ್ತಿವೆ. ಇದಕ್ಕೆ ರೈತರು ಕೂಲಿ ಕಾರ್ಮಿಕರನ್ನು ಕೂಲಿ ಕೆಲಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕರೆಸಿಕೊಳ್ಳುತ್ತಿದ್ದಾರೆ. ಆದರೆ, ದುಬಾರಿ ಕೂಲಿ, ಹೆಚ್ಚಿನ ಜನರ ನಿರ್ವಹಣೆ ಕಿರಿಕಿರಿ, ಕೂಲಿಕಾರರ ಸತಾಯಿಸುವಿಕೆ ಮತ್ತು ಗೈರು ಸೇರಿ ನಾನಾ ಕಾರಣಗಳಿಗೆ ಮಾಲೀಕರು ಸರಳ ಯಂತ್ರೋಪಕರಣಗಳ ಮೊರೆ ಹೋಗುವಂತಹುದು ಹೆಚ್ಚಾಗುತ್ತಿದೆ.

ಕರೊನಾ ಎರಡನೇ ಅಲೆ ತೀವ್ರತೆಯ ಸಂದರ್ಭದಲ್ಲಿ ಕೃಷಿ ಚಟುವಟಿಕೆ ನಡೆದರೂ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಮತ್ತು ಬೆಲೆ ಕುಸಿತದಿಂದ ರೈತರು ನಷ್ಟ ಅನುಭವಿಸಿದರು. ಬಂಡವಾಳ ಹೂಡಿಕೆಗೆ ಹಿಂದೇಟು ಹಾಕುತ್ತಿದ್ದರು. ಬಹುತೇಕ ಕಡೆ ಕೃಷಿ ಕೆಲಸ ಕಾರ್ಯಗಳನ್ನು ರೈತರ ಕುಟುಂಬದ ಸದಸ್ಯರು ಕೈಗೊಳ್ಳುತ್ತಿದ್ದರು. ಆದರೆ, ಕರೊನಾ ಸೋಂಕಿನ ತೀವ್ರತೆ ಕುಸಿದು ವಾಣಿಜ್ಯ ಚಟುವಟಿಕೆ ಸಹಜ ಸ್ಥಿತಿಗೆ ಬಂದಿರುವುದರ ನಡುವೆ ಮುಂಗಾರು ಅವಧಿ ಪ್ರಾರಂಭವಾಗುತ್ತಿದ್ದಂತೆ ಸಹಜವಾಗಿ ಕಾರ್ಮಿಕರ ಅಗತ್ಯತೆಯ ಅನಿವಾರ್ಯತೆ ಉಂಟಾಗಿದೆ.

ವಾಡಿಕೆಗಿಂತ ಹೆಚ್ಚು ಮಳೆ: ಪ್ರಸಕ್ತ ಮುಂಗಾರಿನಲ್ಲಿ ಉತ್ತಮ ಮಳೆ ಬೀಳುತ್ತಿದೆ. ವಾಡಿಕೆ ಮಳೆಗಿಂತಲೂ ಶೇ.30 ಹೆಚ್ಚಾಗಿರುವುದರಿಂದ ಕೃಷಿ ಚಟುವಟಿಕೆ ಬಿರುಸಿಗೊಂಡಿದೆ. 1.54 ಲಕ್ಷ ಹೆಕ್ಟೇರ್ ಪ್ರದೇಶ ಬಿತ್ತನೆ ಗುರಿ ಪೈಕಿ ಈಗಾಗಲೇ ಶೇ.60 ಪ್ರದೇಶದಲ್ಲಿ ಬಿತ್ತನೆಯಾಗಿದೆ. ಮುಂಬರುವ ಕೆಲಸ ಕಾರ್ಯಗಳು ಕೂಲಿ ಕಾರ್ಮಿಕರ ಬೇಡಿಕೆಯನ್ನು ಹೆಚ್ಚಿಸಿದೆ. ಈಗಾಗಲೇ ಕರೊನಾ ಹಿನ್ನೆಲೆಯಲ್ಲಿ ನಗರ, ಪಟ್ಟಣ ಪ್ರದೇಶಗಳಿಂದ ಹಲವರು ಖಾಸಗಿ ಕಂಪನಿಗಳಲ್ಲಿ ನೌಕರಿ ಕಳೆದುಕೊಂಡು ಹಳ್ಳಿಗಳಲ್ಲಿ ನೆಲೆಸಿದ್ದಾರೆ. ಸ್ವಂತ ಕೃಷಿ ಜಮೀನಿನಲ್ಲಿ ಕೆಲಸ ಮಾಡಿಸುತ್ತಿದ್ದಾರೆ.

ಪೈಪೋಟಿಯಲ್ಲಿ ದರ : ಕಾರ್ಮಿಕರ ಬೇಡಿಕೆ ಹೆಚ್ಚಳದ ನಡುವೆ ಕೆಲಸಕ್ಕೆ ಕೂಲಿಯಲ್ಲಿನ ವ್ಯತ್ಯಾಸವು ಪೈಪೋಟಿಗೆ ಕಾರಣವಾಗಿದೆ. ಕೃಷಿ ಜಮೀನಿನಲ್ಲಿ ಮುಂಗಾರು ಅವಧಿಯ ರಾಗಿ, ಮುಸುಕಿನಜೋಳ, ಪಾಪ್‌ಕಾರ್ನ್, ತೊಗರಿ, ನೆಲಗಡಲೆ, ಹುರುಳಿ, ಅವರೆ ಸೇರಿ ಇತರ ಬೆಳೆಗಳ ಕೆಲಸ ಕಾರ್ಯಗಳಿಗೆ ದಿನಕ್ಕೆ ಗಂಡಸರಿಗೆ 500 ರೂ ಮತ್ತು ಹೆಂಗಸರಿಗೆ 350 ರೂ ನೀಡಲಾಗುತ್ತದೆ. ಮತ್ತೊಂದೆಡೆ ದ್ರಾಕ್ಷಿ ಕಟಾವು, ಕ್ಯಾರೆಟ್ ಮತ್ತು ಹೂಕೋಸು, ತರಕಾರಿ, ಹೂವುಗಳನ್ನು ಕಿತ್ತು ಮೂಟೆಗೆ ತುಂಬಿಸುವ, ಬೆಳೆಗಳಿಗೆ ಔಷಧ ಸಿಂಪಡಿಸುವ ಕೆಲಸಕ್ಕೆ ಪುರುಷರಿಗೆ 750 ರೂ ಮತ್ತು ಹೆಂಗಸರಿಗೆ 650 ರೂ. ನೀಡಲಾಗುತ್ತದೆ. ಇನ್ನು ಯಂತ್ರೋಪಕರಣ ಬಳಕೆ, ಕಡಿಮೆ ವೇತನ, ಕೂಲಿ ವಿಳಂಬ ಮತ್ತು ಸತಾಯಿಸುವಿಕೆಗೆ ಕಾರ್ಮಿಕರು ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ.