ಬೇಲೂರು: ಬೇಲೂರು ಪಟ್ಟಣ ಹಾಗೂ ಚಿಕ್ಕಬೇಡಗೆರೆ ಕೆರೆ ಏರಿಗೆ ಹೊಂದಿಕೊಂಡಿರುವ ಕೂಡ್ಲೂರು ನಾಲೆ ಸಮೀಪದ ಗಣಪತಿ ದೇಗುಲದ ಆವರಣದಲ್ಲಿ ಚಿರತೆಯೊಂದು ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದ್ದು, ಶೀಘ್ರ ಚಿರತೆ ಹಿಡಿಯುವಂತೆ ನಾಗರಿಕರು ಆಗ್ರಹಿಸಿದ್ದಾರೆ.
ಘಟನೆ ವಿವರ: ಚಿಕ್ಕಮಗಳೂರಿನ ಸಂತೋಷ್ ಎಂಬುವರು ತಮ್ಮ ಕಾರಿನಲ್ಲಿ ಬೇಲೂರು ಮೂಲಕ ಬೆಂಗಳೂರಿಗೆ ಬುಧವಾರ ಬೆಳಗ್ಗೆ 4.50ರಲ್ಲಿ ಬೇಲೂರು ಪಟ್ಟಣ ಹಾಗೂ ಚಿಕ್ಕಬೇಡಗೆರೆ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕೆರೆ ಏರಿ ಮೇಲೆ ತೆರಳುತ್ತಿದ್ದ ಸಂದರ್ಭ ಚಿರತೆಯೊಂದು ವಾಹನದ ಮುಂದೆಯೇ ಕೂಡ್ಲೂರು ನಾಲೆಯತ್ತ ತೆರಳಿ ಗಿಡಗಳ(ಹೊಬ್ಬೆ) ಒಳಗೆ ಹೋಗಿದ್ದನ್ನು ನೋಡಿದ್ದಾರೆ. ಕೆಲ ಸಮಯದ ನಂತರ ವಾಹನ ನಿಲ್ಲಿಸಿ ಕೆಳಗಿಳಿದ ಸಂತೋಷ್, ಚಿರತೆ ಹೋಗುವುದನ್ನು ನೋಡಿ ಮುಂದೆ ಸಾಗಿ ಬೇಲೂರು ಪಟ್ಟಣದ ತಮ್ಮ ಸ್ನೇಹಿತ ಮೋಹಿದ್ದೀನ್ ಎಂಬುವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ತಕ್ಷಣವೇ ಮೋಹಿದ್ದೀನ್, ನಾಲೆ ಪಕ್ಕದ ಜಮೀನಿನ ಮಾಲೀಕ ರಾಯಾಪುರ ಶಿವಣ್ಣರಿಗೆ ವಿಷಯ ತಿಳಿಸಿದ್ದಾರೆ.
ಬೆಳ್ಳಂಬೆಳಗ್ಗೆಯೇ ಕೂಡ್ಲೂರು ನಾಲೆಯ ಪಕ್ಕದ ಗಣಪತಿ ದೇಗುಲದ ಹತ್ತಿರಕ್ಕೆ ಆಗಮಿಸಿದ ರಾಯಾಪುರ ಶಿವಣ್ಣ, ಬ್ಯಾಟರಿ ಬಿಟ್ಟು ನಾಲೇ ಪಕ್ಕದ ಹೊಬ್ಬೆಯಲ್ಲಿದ್ದ ಚಿರತೆಯನ್ನು ನೋಡಿ ಗಾಬರಿಯಿಂದ ವಾಪಸ್ ಬಂದು ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳ ಪರಿಶೀಲಿಸಿದಾಗ ಚಿರತೆಯ ಹೆಜ್ಜೆ ಗುರುತುಗಳನ್ನು ಕಂಡು ಇದು ಚಿರತೆಯದ್ದೆ ಹೆಜ್ಜೆ ಎಂದು ತಿಳಿಸಿದ್ದಾರೆ.
ಈ ವಿಚಾರವನ್ನು ಶಿವಣ್ಣ ಅವರು ಚಿರತೆ ಇರುವ ಬಗ್ಗೆ ಅಕ್ಕಪಕ್ಕದ ಜಮೀನಿನ ರೈತರು ಹತ್ತಿರಕ್ಕೆ ಬಾರದಂತೆ ಮಾಹಿತಿ ನೀಡಿದ್ದರಿಂದ ಯಾರೂ ಅತ್ತ ಸುಳಿಯಲಿಲ್ಲ. ಆದರೆ ಚಿರತೆ ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಬೆಳಗ್ಗೆ ಬಂದು ಹೋದವರು ಮತ್ತೆ ಅತ್ತ ಸುಳಿಯದಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಯಿತು.
ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ವಿನಯ್‌ಕುಮಾರ್, ನೆರೆದಿದ್ದವರನ್ನು ಸಮಾಧಾನಪಡಿಸಿ ಚಿರತೆ ಹಿಡಿಯಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿ ಸ್ಥಳದಲ್ಲಿ ಸಿಬ್ಬಂದಿ ನೇಮಿಸಿದರು.