ಜಿಲ್ಲೆ

ಕೂಡ್ಲಿಗಿಯಲ್ಲಿ ಹೋಳಿಗೆಮ್ಮ ಹಬ್ಬದ ಸಂಭ್ರಮ

ಅಶೋಕ್ ಕುಮಾರ್ ಎನ್

ಕೂಡ್ಲಿಗಿ: ಉತ್ತಮ ಮಳೆ, ಬೆಳೆ ಮತ್ತು ಜನ-ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಪಟ್ಟಣದಲ್ಲಿ ಮಂಗಳವಾರ ಹೋಳಿಗೆಮ್ಮ ಹಬ್ಬ ಆಚರಿಸಲಾಯಿತು.

ಗ್ರಾಮ ದೇವತೆ ಊರಮ್ಮ ದೇವಿಗೆ ಹೋಳಿಗೆ ಎಡೆಯಿಟ್ಟು ಮಹಿಳೆಯರು ವಿಶೇಷ ಪೂಜೆ ಸಲ್ಲಿಸಿದರು. ಮನೆ ದೇವರ ಕೋಣೆಯಲ್ಲಿ ಬಾಳೆ ಅಥವಾ ಮುತ್ತುಗದ ಎಲೆಯ ಮೇಲೆ ಹೊಸ ಮಣ್ಣಿನ ಕುಡಿಕೆ ಮೇಲೆ ಬೇವಿನ ಎಲೆ, ಹಸಿರು ಬಳೆ, ಹೂವುಗಳನ್ನಿಟ್ಟು ಹೋಳಿಗೆ ನೈವೇದ್ಯ ಸಮರ್ಪಿಸಿ ಪೂಜೆ ಸಲ್ಲಿಸಲಾಯಿತು. ಅನಂತರ ಮನೆಯವರು ಎಲ್ಲ ಪೂಜಾ ಸಾಮಗ್ರಿಗಳನ್ನು ಎಲೆಯಲ್ಲಿಟ್ಟು ಮೌನವಾಗಿ ಪಟ್ಟಣದ ಹೊರವಲಯದಲ್ಲಿರುವ ಊರಮ್ಮನ ಪಾದಗಟ್ಟೆಗೆ ತೆರಳಿ ಎಡೆಯಿಟ್ಟು ಜನ, ಜಾನುವಾರುಗಳ ಆರೋಗ್ಯ, ಫಸಲು ಕಾಪಾಡಬೇಕು ಎಂದು ಬೇಡಿಕೊಂಡರು.

ಈ ಸಂಪ್ರದಾಯ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಸಂಜೆ ಮನೆ ಮಂದಿಯಲ್ಲ ಸಾಮೂಹಿಕವಾಗಿ ಕುಳಿತು ಹೋಳಿಗೆ ಸವಿಯುತ್ತಾರೆ. ಈ ಹಬ್ಬದಲ್ಲಿ ಊಟಕ್ಕೆ ಸಂಬಂಧಿಕರನ್ನು ಬಿಟ್ಟು ಬೇರೆಯವರನ್ನು ಕರೆಯಬಾರದು ಎನ್ನುವ ವಾಡಿಕೆ ಇದೆ.