ಜಿಲ್ಲೆ

ಕೂಡ್ಲಿಗಿಯಲ್ಲಿ ಸುಸಜ್ಜಿತ ಕೃಷಿ ಉತ್ಪನ್ನ ಮಾರುಕಟ್ಟೆ

ಅಶೋಕ್ ಕುಮಾರ್ ಎನ್

ಕೂಡ್ಲಿಗಿ: ತಾಲೂಕಿನಲ್ಲಿ ರೈತರಿಗೆ ಪೂರಕವಾದ ನೀರಾವರಿ, ಕೃಷಿ ವಿಜ್ಞಾನ ಕೇಂದ್ರ ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.

ಪಟ್ಟಣದಲ್ಲಿ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು. ಕೊಟ್ಟೂರು ಎಪಿಎಂಸಿಯಿಂದ ಬೇರ್ಪಟ್ಟ ಕೂಡ್ಲಿಗಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧ್ಯಕ್ಷರಾಗಿ ಕುರಿಹಟ್ಟಿಯ ಎಂ.ಬೋಸಯ್ಯ, ಉಪಾಧ್ಯಕ್ಷರಾಗಿ ಮಾಡ್ಲಕನಹಳ್ಳಿಯ ಕೆ.ಮಹಾದೇವಪ್ಪ ಸರ್ಕಾರದಿಂದ ನಾಮನಿರ್ದೇಶನಗೊಂಡಿದ್ದಾರೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅಭಿವೃದ್ಧಿ ಪಡಿಸಲು ಕೃಷಿ ಸಚಿವರಿಗೆ 100 ಕೋಟಿ ರೂ. ಬೇಡಿಕೆ ಇಡಲಾಗಿತ್ತು, ಆದರೆ, ಈಗಿರುವ ಮಾರುಕಟ್ಟೆಯ ಜಾಗ ಸಾಕಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸುಸಜ್ಜಿತ ಮಾರುಕಟ್ಟೆ ಆರಂಭಕ್ಕೆ 30 ಎಕರೆ ಜಾಗ ಗುರುತಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣದ ಹೊರವಲಯದ ಗುಂಡಿನ ಹೊಳೆ ಬಳಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪಿಸಲು 50 ಎಕರೆ ಜಾಗ ನೀಡಿದ್ದು, ದೆಹಲಿಯಿಂದ ನಿಯೋಗ ಬಂದು ಹಸಿರು ನಿಶಾನೆ ತೋರಿದರೆ, ಸುಮಾರು ಏಳು ಜನ ಕೃಷಿ ವಿಜ್ಞಾನಿಗಳು ಈ ಭಾಗದಲ್ಲಿ ಕಾರ್ಯನಿರ್ವಹಿಸಿ ಕೃಷಿ ಕ್ಷೇತ್ರವನ್ನು ಬಲಪಡಿಸುವರು ಎಂದು ಹೇಳಿದರು.

ಈ ಭಾಗದಲ್ಲಿ ಯಥೇಚ್ಛವಾಗಿ ಶೇಂಗಾ, ಮೆಕ್ಕೆಜೋಳ, ರಾಗಿ ಹಾಗೂ ಹುಣಸೆಹಣ್ಣು ಬೆಳೆಯುವ ರೈತರಿದ್ದಾರೆ. ಹುಣಸೆಹಣ್ಣು ಸಂರಕ್ಷಣಾ ಘಟಕ ನಿರ್ಮಾಣ ಮಾಡಲು ಗುಡೇಕೋಟೆ ಬಳಿ ಜಾಗ ಗುರುತಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.

ಎಪಿಎಂಸಿ ನೂತನ ಆಡಳಿತ ಮಂಡಳಿ ಕೃಷಿಕರ ಹಿತಕ್ಕಾಗಿ ಕೆಲಸ ಮಾಡಬೇಕು. ಏನಾದರೂ ಸಮಸ್ಯೆಗಳು ಇದ್ದಲ್ಲಿ ಎಲ್ಲರೂ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಮೂಲಕ ಕೃಷಿ ಉತ್ಪನ್ನ ಮಾರುಕಟ್ಟೆಯನ್ನು ಅಭಿವೃದ್ಧಿಪಡಿಸಲು ಪಕ್ಷಾತೀತವಾಗಿ ಸಹಕರಿಸಬೇಕೆಂದು ಶಾಸಕ ಎನ್.ಟಿ.ತಿಪ್ಪೇಸ್ವಾಮಿ ಕೋರಿದರು.

ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ಕೆ.ತಿಪ್ಪೇಸ್ವಾಮಿ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನಗೌಡ, ಹೊಸಹಳ್ಳಿ ಬ್ಲಾಕ್ ಅಧ್ಯಕ್ಷ ಕೆ.ಜಿ.ಕುಮಾರ ಗೌಡ, ನಾಗಮಣಿ ಜಿಂಕಾಲ್, ನರಸಿಂಹಗಿರಿ ವೆಂಕಟೇಶ, ತಾಪಂ ಮಾಜಿ ಸದಸ್ಯರಾದ ಮಂಜುನಾಥ, ಪಾಪನಾಯಕ ತಮ್ಮಣ್ಣ, ಗುಡೇಕೋಟೆ ಬಷೀರ್, ಕೋಗಳಿ ಮಂಜುನಾಥ ಇತರರಿದ್ದರು.