ಕೊಡಗು: ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಕನ್ನಡ ಭಾಷಾ ಸಂಘ ಹಾಗೂ ವಿದ್ಯಾರ್ಥಿ ಸಂಘದ ವತಿಯಿಂದ ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಗುರುವಾರ ಸರಳವಾಗಿ ಆಚರಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಮುಖ್ಯಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ಇಂದು ಬೃಹತ್ತಾಗಿ ಬೆಳೆದಿದೆ. ಬೆಂಗಳೂರು ನಗರ ನಿರ್ಮಾಣಕ್ಕೆ ನೀಡಿದ ಆದ್ಯತೆಯನ್ನು ಕೆರೆಗಳ ನಿರ್ಮಾಣಕ್ಕೂ ನೀಡಿದ್ದರು ಎಂದರು.
ಕನ್ನಡ ಭಾಷಾ ಶಿಕ್ಷಕ ಕೆ.ಗೋಪಾಲಕೃಷ್ಣ ಅವರು ಕೆಂಪೇಗೌಡರ ವ್ಯಕ್ತಿತ್ವ, ಆಡಳಿತ ವ್ಯವಸ್ಥೆ ಹಾಗೂ ಅವರು ಕೈಗೊಂಡ ಅಭಿವೃದ್ಧಿ ಕಾರ್ಯ ಕುರಿತು ಮಾತನಾಡಿದರು. ಶಿಕ್ಷಕ ಎಂ.ಟಿ.ದಯಾನಂದ ಪ್ರಕಾಶ್, ಬಿ.ಡಿ.ರಮ್ಯಾ, ಬಿ.ಎಸ್.ಅನ್ಸಿಲಾ ರೇಖಾ, ನಯನ ಇದ್ದರು.