ಚಿತ್ರದುರ್ಗ: ಹಿಂದುಗಳ ಬಹುದೊಡ್ಡ ಹಬ್ಬ ಯುಗಾದಿ. ಮನೆಗಳಲ್ಲಿ ಅಜ್ಜ-ಅಜ್ಜಿ, ತಂದೆ-ತಾಯಿ, ಸಹೋದರ-ಸಹೋದರಿ ಹೀಗೆ ಮನೆ ಮಂದಿಯೆಲ್ಲ ಎಣ್ಣೆ ಹಚ್ಚಿಕೊಂಡು ಬೇವಿನ ಮಿಶ್ರಣದ ನೀರಿನೊಂದಿಗೆ ಸ್ನಾನ ಮಾಡುತ್ತಾರೆ. ಕಿರಿಯರು ಹಿರಿಯರ ಆಶೀರ್ವಾದ ಕೂಡ ಪಡೆಯುತ್ತಾರೆ. ಆದರೆ, ಇಲ್ಲಿನ ಪರಿಸ್ಥಿತಿ ಭಿನ್ನ. ಇವರ್ಯಾರಿಗೂ ಸ್ವಂತ ಸೂರಿಲ್ಲ. ತಮ್ಮವರೆನ್ನುವವರೂ ಹತ್ತಿರವಿಲ್ಲ. ಆದರೂ ಮಂಗಳವಾರ ಅವರೆಲ್ಲ ಎಣ್ಣೆ ಮಜ್ಜನದ ಸಂಭ್ರಮದಲ್ಲಿ ಮುಳುಗಿದ್ದರು…
ಅಂದ ಹಾಗೆ ಈ ಹೃದಯಸ್ಮರ್ಶಿ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ತಾಲೂಕಿನ ಗೋನೂರು ನಿರಾಶ್ರಿತರ ಕೇಂದ್ರ. ಇಲ್ಲಿ ಒಟ್ಟು 414 ಮಂದಿ ಆಶ್ರಯ ಪಡೆಯುತ್ತಿದ್ದಾರೆ. ಇದರಲ್ಲಿ ಕೆಲವರು ಅರೆ ಬುದ್ಧಿಮಾಂದ್ಯರು, ಅಂಗವಿಕಲರು, ಮಕ್ಕಳಿಂದ ದೂರವಾದ ವಯೋವೃದ್ಧರು ಇದ್ದಾರೆ. ಇವರಲ್ಲಿ ಅನಾಥ ಪ್ರಜ್ಞೆಯಾಗಲಿ, ಜಾತಿ-ಭೇದವಾಗಲಿ ಕಾಣಲು ಸಾಧ್ಯಲಿಲ್ಲ. ಎಲ್ಲರೂ ಕೂಡು ಕುಟುಂಬದವರಂತೆ ಬಾಳುವ, ಸ್ನೇಹದಿಂದ ಜೀವಿಸುತ್ತಿದ್ದಾರೆ.
ಅನೇಕ ಕಾರಣಕ್ಕೆ ಆಶ್ರಯ ಇಲ್ಲದೆಯೇ ನಿರಾಶ್ರಿತರ ಕೇಂದ್ರ ಸೇರಿದ್ದರೂ ದ್ವೇಷ, ಅಸೂಹೆ ಭಾವನೆ ಮೈಗೂಡಿಸಿಕೊಳ್ಳದೆಯೇ ಅಣ್ಣ-ತಮ್ಮಂದಿರಂತೆ, ಅಕ್ಕ-ತಂಗಿಯರಂತೆ ಬದುಕುತ್ತಿದ್ದಾರೆ. ಸಾಮೂಹಿಕವಾಗಿ ಎಣ್ಣೆ ಹಚ್ಚಿಕೊಂಡ ನಿರಾಶ್ರಿತರ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಒಗ್ಗಟ್ಟಿನೊಂದಿಗೆ ಯುಗಾದಿ ಹಬ್ಬ ಆಚರಿಸಿ, ಮಾದರಿಯಾಗಿದ್ದಾರೆ.
ಎಣ್ಣೆ ಹಚ್ಚುವ ವೇಳೆ ಒಬ್ಬರಿಗೊಬ್ಬರು ಸಹಕಾರ ನೀಡಿ ಸ್ನೇಹ-ಬಾಂಧವ್ಯಕ್ಕೆ ಸಾಕ್ಷಿಯಾದರು. ಸಂತಸದಲ್ಲಿದ್ದ ಎಲ್ಲರೂ ಕೆಲಕಾಲ ಕೇಂದ್ರದ ಸುತ್ತ ಸುತ್ತಾಡಿದರು. 335 ಪುರುಷರು, 79 ಮಹಿಳೆಯರಿದ್ದು, ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಮಾಜ ಕಲ್ಯಾಣ ಇಲಾಖೆಯಿಂದ ನಿರಾಶ್ರಿತರಿಗೆ ಹೊಸ ಬಟ್ಟೆ ಹಾಗೂ ಕೇಂದ್ರದಿಂದ ಅನೇಕರಿಗೆ ಯೂನಿಫಾರ್ಮ್ ವಿತರಿಸಲಾಯಿತು. ನಂತರ ಎಲ್ಲರ ಅಭ್ಯಂಜನ ಸ್ನಾನ ಮುಗಿದ ಬಳಿಕ ಒಗ್ಗೂಡಿ ಹಬ್ಬ ಆಚರಿಸಲಾಯಿತು. ಸಾಮೂಹಿಕ ಆಚರಣೆಯಾದ್ದರಿಂದ ಹೊಸಬರ ಗಮನ ಸೆಳೆಯಿತು.
ಕೇಂದ್ರದಲ್ಲಿ ಹೋಳಿಗೆ ಸೇರಿ ತರಹೇವಾರಿ ಖಾದ್ಯ ಸಿದ್ಧಪಡಿಸಲಾಗಿತ್ತು. ಎಲ್ಲರೂ ಹಬ್ಬದೂಟ ಸವಿದರು. ಕೇಂದ್ರದ ಅಧೀಕ್ಷಕ ಎನ್.ಮಹದೇವಯ್ಯ, ಸಿಬ್ಬಂದಿಗಳಾದ ದೇವರಾಜ್, ವಿಜಯಕುಮಾರ್, ಪಾಲಯ್ಯ, ರಮೇಶ್ ಇತರರಿದ್ದರು.
ಗ್ರಾಮೀಣ ಭಾಗಗಳಲ್ಲಿ ವಿಶೇಷಾಚರಣೆ: ಬುಡಕಟ್ಟು ಹಾಗೂ ಬಯಲುಸೀಮೆಯ ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಗ್ರಾಮೀಣ ಭಾಗಗಳ ಪೈಕಿ ಕೆಲವೆಡೆ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುವ ಮೂಲಕ ಅನ್ನದಾತರು ಯುಗಾದಿ ಹಬ್ಬ ಆಚರಿಸಿದರು.
ಮಾವಿನಕಾಯಿ, ಹುಣಿಸೇಹಣ್ಣು, ಮೆಣಸು, ಉಪ್ಪು, ಬೆಲ್ಲ, ಬೇವು ಇತರೆ ಪದಾರ್ಥಗಳನ್ನು ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ತಯಾರಿಸಿ ಅದನ್ನು ಸೇವಿಸುವ ಮೂಲಕವೂ ಕೆಲವರು ವಿಶೇಷವಾಗಿ ಆಚರಿಸಿದರು. ಹಲವೆಡೆ ವರ್ಷದ ಫಲವನ್ನು ಸೂಚಿಸುವ ಪಂಚಾಂಗ ಶ್ರಾವಣ ಕಾರ್ಯಕ್ರಮ ನಡೆಯಿತು.