ಬಾಗಲಕೋಟೆ: ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಮಠಕ್ಕೆ ದಿಢೀರನೇ ಗೇಟ್ ಅಳವಡಿಸಿ, ಬೀಗ ಜಡಿದಿದ್ದ ಪ್ರಕರಣ ಸ್ವಾಮೀಜಿ ಜೊತೆಗೆ ಟ್ರಸ್ಟ್ ಹಾಗೂ ಸಮಾಜದ ಮುಖಂಡರು ನಡೆಸಿದ ಸಭೆ ಸುಖಾಂತ್ಯ ಕಂಡಿದ್ದು, ನಡಿದಿದ್ದ ಬೀಗ ಓಪನ್ ಆಗಿದೆ. ಆದರೆ, ಮಠಕ್ಕೆ ಮಂಗಳವಾರ ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಸೂಚನೆ ಮೇರಿಗೆ ಸಿಸಿ ಟಿವಿ ಕ್ಯಾಮರಾ ಅಳವಡಿಸಲಾಗಿದೆ.
ಮೂರು ದಿನಗಳ ಹಿಂದೆ ಶ್ರೀಮಠಕ್ಕೆ ಮೂರು ಕಡೆಗೆ ಗೇಟ್ ಅಳವಡಿಸಿ, ಬೀಗ ಹಾಕಿದ್ದು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ಸ್ವಾಮೀಜಿ ಹಾಗೂ ಟ್ರಸ್ಟ್ ಅಧ್ಯಕ್ಷರ ನಡುವಿನ ಮುಸುಕಿನ ಗುದ್ದಾಟದ ಭಾಗ ಎಂದೇ ಚರ್ಚೆಗಳು ನಡೆದಿದ್ದವು. ಶ್ರೀಗಳನ್ನು ಪೀಠಕ್ಕೆ ಬರದಂತೆ ತಡೆಯುವ ಪ್ರಯತ್ನ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಆದರೆ, ಸ್ವಾಮೀಜಿ ಇತ್ತೀಚಿಗೆ ಮಠಕ್ಕೆ ಬರುತ್ತಿಲ್ಲ. ನಮ್ಮ ಸಂಪರ್ಕದಲ್ಲೂ ಇಲ್ಲ. ಮಠದಲ್ಲಿ ಅಹಿತಕರ ಘಟನೆ ನಡೆಯಬಾರದು ಎಂದು ಭದ್ರತೆ ದೃಷ್ಟಿಯಿಂದ ಗೇಟ್ ಅಳವಡಿಸಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ತಿಳಿಸಿದ್ದರು.
ಈ ನಡುವೆ ಬೀಗ ಒಡೆದು ಮಠ ಪ್ರವೇಶಿಸಿದ್ದಾರೆಂದು ಮಠಕ್ಕೆ ಇತ್ತೀಚಿಗೆ ವ್ಯವಸ್ಥಾಪಕ ಎಂದು ನೇಮಕವಾಗಿರುವ ಚಂದ್ರಶೇಖರ ಚಿತ್ತರಗಿ ಅವರು ಸ್ವಾಮೀಜಿ ಪರವಾಗಿ ಇದ್ದ ಕೆಲವರ ಮೇಲೆ ಹುನಗುಂದ ಪೊಲೀಸ್ ಠಾಣೆಯಲ್ಲಿ ಸೋಮವಾರ ರಾತ್ರಿ ಎ-ïಐಆರ್ ಮಾಡಿಸಿದ್ದರು. ಇದು ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಲು ಕಾರಣವಾಗಿತ್ತು.
ಸೋಮವಾರ ನಡೆದ ಇಷ್ಟೆಲ್ಲ ಬೆಳವಣಿಗೆಗಳ ನಡುವೆ ಮಂಗಳವಾರ ಪಂಚಮಸಾಲಿ ಪೀಠದ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೂಡಲಸಂಗಮ ಮಠಕ್ಕೆ ಆಗಮಿಸಲಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿತು. ಬೆಳಗ್ಗೆ ಟ್ರಸ್ಟ್ನ ಹಾಗೂ ಸಮಾಜದ ಕೆಲ ಹಿರಿಯರು ಮಠಕ್ಕೆ ತೆರಳಿ ಗೌಪ್ಯ ಚರ್ಚೆ ನಡೆಸಿದರು. ಬಳಿಕ ಹುನಗುಂದ ಪಟ್ಟಣಕ್ಕೆ ತೆರಳಿದರು. ಅಲ್ಲಿಗೆ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಹ ಆಗಮಿಸಿದರು.
ಹುನಗುಂದ ಪಟ್ಟಣದ ಬಸವಮಂಟಪದಲ್ಲಿ ಶ್ರೀಗಳು ಮತ್ತು ಟ್ರಸ್ಟ್ನ ವ್ಯಕ್ತಿ ಹಾಗೂ ಸಮಾಜದ ಕೆಲ ಹಿರಿಯ ಮುಖಂಡರು ಸಭೆ ನಡೆಸಿದರು. ಟ್ರಸ್ಟ್ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಅವರು ಬೆಂಗಳೂರಗೆ ಹೋಗಿದ್ದರಿಂದ ಅವರ ಸಭೆಯಲ್ಲಿ ಪಾಲ್ಗೊಂಡಿರಲಿಲ್ಲ. ಸುಮಾರು ಒಂದು ಗಂಟೆ ಕಾಲ ನಡೆದು ಮಾತುಕತೆ ಬಲಪ್ರದವಾಗಿದ್ದು, ಸಂಜೆ ಹೊತ್ತಿಗೆ ಸಮಾಜದ ಮುಖಂಡರು, ಭಕ್ತರು ಸೇರಿ ಶ್ರೀಗಳನ್ನು ಕೂಡಲಸಂಗಮ ಮಠಕ್ಕೆ ಕರೆದುಕೊಂಡು ಹೋದರು.
ಸಭೆಯಲ್ಲಿ ಪಂಚಮಸಾಲಿ ಸಮಾಜದ ಜಿಲ್ಲಾ ಅಧ್ಯಕ್ಷ ಧರಿಯಪ್ಪ ಸಾಂಗ್ಲಿಕರ, ಟ್ರಸ್‌ನ ಸದಸ್ಯ ಎಲ್.ಎಂ.ಪಾಟೀಲ, ಸಮಾಜದ ಮುಖಂಡರಾದ ಗಿರೀಶ್ ಪಾಟೀಲ, ಮಹಾಂತೇಶ್ ಪಾಟೀಲ, ಬಸವರಾಜ್ ಕಡಪಟ್ಟಿ, ಎಂ.ಎಸ್.ಪಾಟೀಲ, ರುದ್ರಗೌಡ ಬಿರಾದಾರ, ಸುಭಾಸ ತಾಳಿಕೋಟಿ ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಸಮಾಜದ ಅಧ್ಯಕ್ಷರು ಸಭೆಯಲ್ಲಿ ಪಾಲ್ಗೊಂಡು ಶ್ರೀಮಗಳ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹುನಗುಂದ ಪಟ್ಟಣದಲ್ಲಿ ನಡೆದ ಸಭೆ ಬಳಿಕ ಸುದ್ದಿಗಾರರ ಜೊತೆ ಮಾತನಾಡಿ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮಠಕ್ಕೆ ಬೀಗ ಹಾಕಿದ ವಿಚಾರ ನನಗೆ ಬಹಳಷ್ಟು ನೋವುಂಟು ಮಾಡಿದೆ. ನನ್ನ ಮಠಕ್ಕೆ ಎಂದೂ ಬಾಗಿಲು ಹಾಕಿರಲಿಲ್ಲ. ಕೆಲ ಭಕ್ತರು ತಿಳಿಯದೇ ಬಾಗಿಲು ಹಾಕಿದ್ದರು. ಶ್ರೀಪೀಠದ ಧರ್ಮದರ್ಶಿಗಳೊಂದಿಗೆ ಸಭೆ ಮಾಡಿ ಸುಖಾಂತ್ಯ ಮಾಡಿದ್ದಾರೆ.
ನಮ್ಮ ಭಕ್ತರು ಶಾಖಾ ಮಠ ಮಾಡುತ್ತೇವೆ ಎಂದಿದ್ದರು. ಅವೆಲ್ಲ ಬೇಡ ಕೂಡಲಸಂಗಮ ಪೀಠ ಇದೆ ಎಂದು ತಿಳಿಸಿದ್ದೇನೆ. ಇದೀಗ ಕೂಡಲಸಂಗಮ ಮಠದ ಭಕ್ತರ ಒತ್ತಾಸೆಯದ ಮೇರಿಗೆ ಶ್ರೀಪೀಠಕ್ಕೆ ತೆರಳುತ್ತಿದ್ದೇನೆ. ಇದೇ ವೇಳೆ ನಮ್ಮ ಸಮಾಜದ ಮುಖಂಡರ ಮೇಲೆ ದೂರು ದಾಖಲಾಗಿರುವುದು ನನಗೆ ಎಲ್ಲಕ್ಕಿಂತ ದುಃಖ ತಂದಿದೆ. ಅವರೆಲ್ಲ ನಮ್ಮ ಮಠದ ರಕ್ಷಣೆಗಾಗಿ ಬಂದಿದ್ದವರು. ಅಂತವರ ಮೇಲೆ ದೂರು ದಾಖಲಾಗಿರುವುದು ನನಗೆ ನೋವಿದೆ. ನಾನು ಹೋರಾಟ ಮಾಡುವ ವೇಳೆ ಕೇಸ್ ದಾಖಲಾಗುತ್ತಿದ್ದವು. ಆದರೆ, ಇದೀಗ ನನ್ನ ಸಲುವಾಗಿ ನನ್ನ ಭಕ್ತರ ಮೇಲೆ ದೂರು ದಾಖಲಾಗಿದ್ದು ನನಗೆ ಬಹಳ ಬೇಸರ ಉಂಟು ಮಾಡಿದೆ ಎಂದರು.
ಮುAದೆ ಈ ರೀತಿ ಘಟನೆ ಆಗದಂತೆ ಸಭೆಯಲ್ಲಿ ಪಾಲ್ಗೊಂಡಿದ್ದ ಹಿರಿಯರು ನೇತೃತ್ವ ವಹಿಸಿಕೊಂಡು ಸಭೆ ಸುಖಾಂತ್ಯಗೊಳಿಸಿದ್ದಾರೆ. ನನ್ನ ಬದುಕಿನ ಕಣ ಕಣದಲ್ಲೂ ಸಮಾಜಕ್ಕಾಗಿ ಬದುಕಿದ್ದೇನೆ. ನನ್ನ ಭಕ್ತರ ಮನೆಗಳೇ ನನಗೆ ಶ್ರೀಪೀಠ ಇದ್ದಂತೆ. ಯಾರು ಏನೇ ಮಾಡಿದರೂ ಅವರೆಲ್ಲ ನನ್ನವರು. ಅವರನ್ನು ಕರೆದುಕೊಂಡು ಮುನ್ನೆಡೆಯುತ್ತೇನೆ. ಈಗ ನಡೆದ ಘಟನೆಯಿಂದ ಸಮಾಜದ ಜನರ ಮನಸ್ಸಿಗೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಕಾಶಪ್ಪನವರ ಹಾಗೂ ನನ್ನ ಮಧ್ಯ ಗುರು-ಶಿಷ್ಯರ ಸಂಬAಧವಿದೆ. ಮೀಸಲಾತಿ ಹೋರಾಟ ನಿರಂತರ, ಅದು ನನ್ನ ಉಸಿರು. ಸಮಾಜಕ್ಕೆ ೨ಎ ಮೀಸಲಾತಿ ಸಿಗುವವರೆಗೂ ನಾನು ಹೋರಾಟ ಮಾಡುತ್ತೇನೆ. ಹೋರಾಟದಲ್ಲಿ ನಿಮಗೆ ಭಾಗವಹಿಸಲು ಇಷ್ಟ ಇಲ್ಲದಿದ್ದರೆ ಬರಬೇಡಿ, ನಾವೇನು ತಪ್ಪು ತಿಳಿಯಲ್ಲ ಎಂದು ಸೂಕ್ಷ÷್ಮವಾಗಿ ಎಚ್ಚರಿಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ಹೇಳಿಕೆ ನೀಡಿದ್ದೆ ಶ್ರೀಗಳಿಗೆ ಮುಳುವಾಯಿತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಪೂಜ್ಯರು, ಹೌದು ಆ ಹೇಳಿಕೆಯೇ ನನಗೆ ಇಷ್ಟೆಲ್ಲ ಆಗಲು ಕಾರಣವಾಯಿತು. ಮುಖ್ಯಮಂತ್ರಿಗಳ ನನಗೆ ಆತ್ಮೀಯರು. ನಾನು ಯಡಿಯೂರಪ್ಪ, ಜಗದೀಶ್ ಶೆಟ್ಟರ, ಬಸವರಾಜ್ ಬೊಮ್ಮಾಯಿ ಅವರ ಮನೆ ಎದುರು ಸಮಾಜದ ಮೀಸಲಾತಿಗಾಗಿ ಹೋರಾಟ ಮಾಡಿದ್ದೇನೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪಂದಿಸಲಿಲ್ಲ ಎಂದು ಹೇಳಿದ್ದೆ, ಅದರಲ್ಲೇನು ತಪ್ಪಿದೆ? ಹೋರಾಟವೇ ನನಗೆ ಇಷ್ಟೆಲ್ಲ ಆಗಲು ಕಾರಣವಾಯಿತು ಎಂದು ಶ್ರೀಗಳು ಹೇಳಿದರು.