ರೇವತಗಾಂವ: ಗ್ರಾಮೀಣ ಭಾಗದ ಜಾತ್ರೆ ಸಮಾರಂಭಗಳಲ್ಲಿ ಕುಸ್ತಿ ಕಲೆಗಳು ಇನ್ನೂ ಜರುಗುತ್ತಿರುವುದು ಸ್ಮರಣೀಯ. ಅವುಗಳ ಉಳಿವಿಗಾಗಿ ಯುವಕರು ಮುಂದಾಗಬೇಕು ಎಂದು ಶಾಸಕ ವಿಠ್ಠಲ ಕಟಕಧೋಂಡ ಹೇಳಿದರು.
ಸಮೀಪದ ಉಮರಜ ಗ್ರಾಮದ ರೇವಣಸಿದ್ಧೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ ಜಂಗಿನಿಕಾಲಿ ಕುಸ್ತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭೀಮಾಶಂಕರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಎಂ.ಆರ್.ಪಾಟೀಲ ಮಾತನಾಡಿದರು.
ಗ್ರಾಮಗಳಲ್ಲಿ ಗರಡಿ ಮನೆಗಳನ್ನು ತೆರೆಯಬೇಕು. ಉತ್ತಮ ಮಾರ್ಗದರ್ಶನ ನೀಡುವ ಗುರು ದೊರೆಯಬೇಕು. ಅಂದಾಗ ನೀವು ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧರಾಗಿ ಪ್ರಶಸ್ತಿಗಳನ್ನು ಪಡೆಯಲು ಸಾಧ್ಯ ಎಂದರು.
ಭೈರವನಾಥ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮಹಾದೇವ ಸಾಹುಕಾರ ಬೈರಗೊಂಡ ಮಾತನಾಡಿ, ಯುವಕರು ದುಶ್ಚಟಗಳಿಗೆ ಬಲಿಯಾಗದೆ ಪೌಷ್ಟಿಕ ಆಹಾರ ಸೇವಿಸಿ ಜಗಜಟ್ಟಿಗಳಾಗಬೇಕು ಎಂದರು.
ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕ ರಾಜು ಆಲಗೂರ, ಘೂಳೇಶ್ವರ ಮಹಾರಾಜರು, ಉಮರಜ ಗ್ರಾಪಂ ಅಧ್ಯಕ್ಷ ಕೌಂಶೇನ್ ಸಾವಳೆ, ಪಿಡಿಒ ಎಲ್.ಎ್.ನದಾಫ್, ಪಿಕೆಪಿಎಸ್ ಅಧ್ಯಕ್ಷ ಆರ್.ಆರ್.ರುದ್ರಾಕ್ಷಿ, ಗ್ರಾಪಂ ಮಾಜಿ ಸದಸ್ಯ ಭೀಮಾಶಂಕರ ರುದ್ರಾಕ್ಷಿ, ನೂರಂದಯ್ಯ ಮಠಪತಿ ಹಾಗೂ ಎಲ್ಲ ಗ್ರಾಪಂ ಸದಸ್ಯರು, ಗ್ರಾಮಸ್ಥರು, ಮುಖಂಡರು ಇದ್ದರು.