ಜಿಲ್ಲೆ

ಕುಸಿಯುತ್ತಿದ್ದ ಹಳೇಬೀಡು ದ್ವಾರಸಮುದ್ರ ಕೆರೆ ಏರಿಯ ಮೇಲೆ ಸಂಚಾರ ಸ್ಥಗಿತ


ಹಳೇಬೀಡು : ಅಪಾಯಕಾರಿಯಾಗಿ ಕುಸಿಯುತ್ತಿದ್ದ ದ್ವಾರಸಮುದ್ರ ಕೆರೆ ಏರಿಯ ರಸ್ತೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಕಾಮಗಾರಿ ಆರಂಭಿಸಲಾಗಿದ್ದು ತಾತ್ಕಾಲಿಕವಾಗಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

ಶನಿವಾರವಾರ ಬೆಳಗ್ಗೆ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದ್ದು, ಶನಿವಾರವೇ ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸರ ಸಹಕಾರದೊಂದಿಗೆ ಏರಿ ಕುಸಿಯುತ್ತಿದ್ದ ಸ್ಥಳಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ಸಂಚಾರವನ್ನು ಮಿತಿಗೊಳಿಸಿದ್ದರು.

ಹಳೇಬೀಡಿನಿಂದ ಅಡಗೂರು, ಸಾಲಗಾಮೆ ಮೂಲಕ ಹಾಸನಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಇದಾಗಿದ್ದು ದುರಸ್ತಿ ಕಾಮಗಾರಿ ಮುಗಿಯುವವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ದ್ವಾರಸಮುದ್ರ ಕೆರೆಯಲ್ಲಿ ನೀರು ತುಂಬುತ್ತಿರುವ ಜತೆಗೇ ಏರಿಗೆ ಹಾನಿಯಾಗುತ್ತಿರುವ ಬಗ್ಗೆ ಸೆಪ್ಟೆಂಬರ್ 22ರಂದು ‘ವಿಜಯವಾಣಿ’ಯಲ್ಲಿ ವಿಸ್ತೃತ ವರದಿ ಪ್ರಕಟವಾಗಿತ್ತು. ಇದೀಗ ಹಾನಿಯ ಬಗ್ಗೆ ಮುನ್ನೆಚ್ಚರಿಕೆ ವಹಿಸಿರುವ ಅಧಿಕಾರಿಗಳು ಎರಡು ಕಿ.ಮೀ ಉದ್ದದ ಏರಿಯನ್ನು ಸರಿಪಡಿಸಲು ಮುಂದಾಗಿದ್ದಾರೆ.

ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ್ ಮಾತನಾಡಿ, ಪಿಡಬ್ಲುಡಿ, ಸಣ್ಣ ನೀರಾವರಿ ಹಾಗೂ ಇತರೆ ಸಂಬಂಧಪಟ್ಟ ಇಲಾಖೆಗಳ ಅನುದಾನದಲ್ಲಿ ಕೆರೆಯ ಏರಿಗೆ ಯಾವುದೇ ಹಾನಿಯಾಗದಂತೆ ಕಾಮಗಾರಿ ನಡೆಸುತ್ತೇವೆ. ಇದಕ್ಕಾಗಿ 2 ಕೋಟಿ ರೂ. ಆರಂಭಿಕ ಅನುದಾನ ನಿಗದಿಯಾಗಿದ್ದು, ಸ್ಥಳೀಯ ಶಾಸಕರ ನಿರ್ದೇಶನದಂತೆ ಶೀಘ್ರದಲ್ಲಿ ದುರಸ್ತಿ ಕಾಮಗಾರಿ ನಡೆಸಿ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಹೇಳಿದರು.

ಪರ್ಯಾಯ ಮಾರ್ಗ ಬಳಸಲು ಸೂಚನೆ:ಹಾಸನದಿಂದ ಅಡಗೂರು ಮಾರ್ಗ  ಹಳೇಬೀಡಿಗೆ ಬರುವವರು ಕ್ಯಾತನಕೆರೆ-ಮಲ್ಲಾಪುರ ಸಂಪರ್ಕ ರಸ್ತೆ ಹಾಗೂ ಹಗರೆ-ಹಾಸನ ಹೆದ್ದಾರಿ ಬಳಸಲು ಸಾರಿಗೆ ಇಲಾಖೆ ಸೂಚಿಸಿದೆ. ಕಾಮಗಾರಿ ಮುಗಿದ ಬಳಿಕ ಸಂಚಾರ ಎಂದಿನಂತೆ ಇರಲಿದೆ.
ಲೋಕೋಪಯೋಗಿ ಇಂಜಿನಿಯರ್ ರಮೇಶ್, ಎಇಇ ಮಹೇಶ್ , ಸಣ್ಣ ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಸಂತೋಷ್, ಪಿಎಸ್‌ಐ ಗಿರಿಧರ್ ಹಾಗೂ ಗುತ್ತಿಗೆದಾರ ಶಿವಶಂಕರಸ್ವಾಮಿ ಇದ್ದರು.