ಮೂಡಲಗಿ ತಾಲೂಕಿನ ಕೌಜಲಗಿ ಹೋಬಳಿ ವ್ಯಾಪ್ತಿಯಲ್ಲಿ ಹೆಸರು ಬೆಳೆ ಒಕ್ಕಣೆಯಲ್ಲಿ ತೊಡಗಿಸಿಕೊಂಡಿರುವ ರೈತರು. 
ಜಿಲ್ಲೆ

ಕುಸಿದ ಹೆಸರು ದರ, ಆತಂಕದಲ್ಲಿ ಬೆಳೆಗಾರ

Belagavi

ಬೆಳಗಾವಿ: ಮುಂಗಾರು ಹಂಗಾಮಿನ ಪ್ರಮುಖ ವಾಣಿಜ್ಯ ಬೆಳೆಗಳಲ್ಲಿ ಒಂದಾದ ಹೆಸರು ಬೆಳೆ ದರದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿತವಾಗಿದ್ದು, ಸಾವಿರಾರು ರೈತರು ಆತಂಕಕ್ಕೆ ಒಳಗಾಗಿದ್ದಾರೆ. ಸರ್ಕಾರವು ನಿಗದಿತ ಸಮಯದಲ್ಲಿ ಖರೀದಿ ಕೇಂದ್ರವನ್ನೂ ಆರಂಭಿಸದ ಹಿನ್ನೆಲೆಯಲ್ಲಿ ಬೆಳಗಾರರು ಇನ್ನಷ್ಟು ಸಂಕಷ್ಟ ಎದುರಿಸುವಂತಾಗಿದೆ.

ರಾಜ್ಯದ ವಿವಿಧ ಸಗಟು ಮತ್ತು ಚಿಲ್ಲರೆ ಮಾರುಕಟ್ಟೆಗಳಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಕ್ವಿಂಟಾಲ್ ಹೆಸರು ಬೆಳೆ 7,450 ರೂ. ವರೆಗೂ ಮಾರಾಟವಾಗಿತ್ತು. ಇದೀಗ ಮಾರುಕಟ್ಟೆಗಳಲ್ಲಿ ಹೆಸರಿನ ಆವಕ ಹೆಚ್ಚಾಗುತ್ತಿದ್ದಂತೆ ದರವೂ ಇಳಿಯತೊಡಗಿದೆ.

ರೈತ ಕಂಗಾಲು: ಮಾರುಕಟ್ಟೆಗಳಲ್ಲಿ ಸದ್ಯ ಗುಣಮಟ್ಟದ ಹೆಸರು ಕ್ವಿಂಟಾಲ್‌ಗೆ 4,860ರಿಂದ 5,700 ರೂ. ದರದಲ್ಲಿ ಮಾರಾಟವಾಗುತ್ತಿದೆ. ಈ ಬಾರಿ ನಿರಂತರ ಮಳೆಯಿಂದಾಗಿ ಹೆಸರುಕಾಳು ಕಪ್ಪಾಗಿದ್ದು, ಹೆಸರಿನ ಗುಣಮಟ್ಟವೂ ಕಡಿಮೆ ಇರುವುದರಿಂ ಕ್ವಿಂಟಾಲ್‌ಗೆ 3,800 ರೂ.ನಿಂದ 4,600 ರೂ. ವರೆಗೆ ಬೆಲೆ ಇದ್ದು, ಕಷ್ಪಪಟ್ಟು ಹೆಸರು ಬೆಳೆದಿರುವ ರೈತರು ಕಂಗಾಲಾಗಿದ್ದಾರೆ.

ಅಗ್ಗದ ದರಕ್ಕೆ ಮಾರಾಟ: ನಾಲ್ಕೈದು ವರ್ಷದ ಅವಧಿಯಲ್ಲಿ ಹೆಸರುಬೆಳೆ ಕ್ವಿಂಟಾಲ್‌ಗೆ ಸರಾಸರಿ 6,850ರಿಂದ 7,200 ರೂ. ವರೆಗೆ ಮಾರಾಟವಾಗಿತ್ತು. ಆದರೆ, ಈ ವರ್ಷ ಹೆಸರು ಬೆಳೆಯ ದರ ದಿನವೂ ಇಳಿಕೆಯಾಗುತ್ತಿದೆ. ಇತ್ತ ಸರ್ಕಾರವೂ ಸಹ ಬೆಂಬಲ ಬೆಲೆಯ ಖರೀದಿ ಕೇಂದ್ರಗಳನ್ನೂ ಆರಂಭಿಸಿಲ್ಲ. ಇದರಿಂದಾಗಿ ಬೆಳೆಗಾರರು ಅನಿವಾರ್ಯವಾಗಿ ವ್ಯಾಪಾರಿಗಳಿಗೆ ಅಗ್ಗದ ದರಕ್ಕೆ ಮಾರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತಿದೆ. ಇದರಿಂದಾಗಿ ಕ್ವಿಂಟಾಲ್ ಹೆಸರಿಗೆ ಸರಾಸರಿ 1,500ರಿಂದ 2,000 ರೂ. ವರೆಗೆ ರೈತರಿಗೆ ನಷ್ಟ ಉಂಟಾಗುತ್ತಿದೆ.

ಖರೀದಿ ಕೇಂದ್ರ ಆರಂಭಿಸಿ: 2021-22ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ 6.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತನೆ ಮಾಡಲಾಗಿದೆ. ಅದರಲ್ಲಿ ಗದಗ, ಬೀದರ, ವಿಜಯಪುರ, ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಅಧಿಕ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದೆ. ಜುಲೈ ಕೊನೆಯವಾರ ಮತ್ತು ಆಗಸ್ಟ್ ಮೊದಲ ವಾರದಿಂದ ಹೆಸರು ಬೆಳೆಯ ಒಕ್ಕಣೆ ಆರಂಭವಾಗಿದೆ. ಆದರೆ, ಹೆಸರು ಬೆಳೆಯ ದರ ದಿನದಿಂದ ದಿನಕ್ಕೆ ಇಳಿಕೆಯಾಗುತ್ತಿದೆ. ಅಲ್ಲದೆ, ಜಮೀನಿನಲ್ಲಿ ಬೆಳೆದು ನಿಂತಿರುವ ಹೆಸರು ಕಾಯಿ ಬಿಡಿಸಲು ಕಾರ್ಮಿಕರ ಕೂಲಿ 300 ರೂ.ಗೆ ಏರಿಕೆಯಾಗಿದೆ. ಈ ನಡುವೆ ಮಾರುಕಟ್ಟೆಯಲ್ಲಿ ದರ ಕುಸಿತವಾಗುತ್ತಿರುವುದರಿಂದ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಹೀಗಾಗಿ ಸರ್ಕಾರ ಕೂಡಲೇ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಿ ಬೆಳೆಗಾರರಿಗೆ ನೆರವಾಗಬೇಕು ಎಂದು ರೈತರಾದ ಮಂಜುನಾಥ ಕೊಪ್ಪದ, ಶ್ರೀಕಾಂತ ದೇಸಾಯಿ, ನಿಂಗಪ್ಪ ಹೊರಟ್ಟಿ ಇತರರು ಆಗ್ರಹಿಸಿದ್ದಾರೆ.

ಬೆಂಬಲ ಬೆಲೆ ೋಷಣೆ: ಮುಂಗಾರು ಹಂಗಾಮಿನ ಎಲ್ಲ ಬೆಳೆಗಳಿಗೆ ಸರ್ಕಾರವು ಬೆಂಬಲ ಬೆಲೆ ೋಷಿಸಿದೆ. ಕ್ವಿಂಟಾಲ್ ಹೆಸರಿಗೆ 7,275 ರೂ., ಉದ್ದು 6,300 ರೂ., ಶೇಂಗಾ 5,550 ರೂ. ಬೆಂಬಲ ಬೆಲೆ ಘೋಷಿಸಿದೆ. ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಎಪಿಎಂಸಿ ಮೂಲಕ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ತಿಳಿಸಿದ್ದಾರೆ.

ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಒಕ್ಕಣೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಸವದತ್ತಿ, ರಾಮದುರ್ಗ, ಅಥಣಿ ಸೇರಿದಂತೆ ವಿವಿಧ ಭಾಗಗಳಲ್ಲಿ ಬೆಂಬಲ ಬೆಲೆ ಖರೀದಿ ಕೇಂದ್ರ ಆರಂಭಿಸಲು ಕ್ರಮ ವಹಿಸಲಾಗಿದ್ದು, ಶೀಘ್ರದಲ್ಲಿಯೇ ಖರೀದಿ ಕಾರ್ಯ ಆರಂಭವಾಗಲಿದೆ.| ಎಂ.ಜಿ. ಹಿರೇಮಠ ಜಿಲ್ಲಾಧಿಕಾರಿ, ಬೆಳಗಾವಿ

| ಮಂಜುನಾಥ ಕೋಳಿಗುಡ್ಡ ಬೆಳಗಾವಿ