ಎನ್.ವೆಂಕಟೇಶ್, ಚಿಕ್ಕಬಳ್ಳಾಪುರ
ಹಿಪ್ಪು ನೇರಳೆ ಸೊಪ್ಪಿನ ಬೆಲೆ ಇತ್ತೀಚೆಗೆ ದಿನದಿಂದ ದಿನಕ್ಕೆ ನಿರಂತರವಾಗಿ ಕಡಿಮೆಯಾಗುತ್ತಿರುವುದು ಜಿಲ್ಲೆಯ ರೇಷ್ಮೆ ಬೆಳೆಗಾರರಲ್ಲಿ ನಿರಾಸೆ ಮೂಡಿಸಿದೆ. ಮಾರ್ಚ್ ಪ್ರಾರಂಭದಲ್ಲಿ ಒಂದು ಮೂಟೆ ದರ 1100 ರೂ.ಗಳಿಂದ 1200ಕ್ಕೆ ಮಾರಾಟವಾಗುತ್ತಿತ್ತು. ಆದರೆ, ಇದೀಗ 750ರಿಂದ 800ಕ್ಕೆ ಕುಸಿದಿದೆ. ಅಲ್ಲಲ್ಲಿ 600ಕ್ಕೂ ಮಾರಾಟವಾಗುತ್ತಿದೆ. ಹೀಗೆ ಮುಂಬರುವ ದಿನಗಳಲ್ಲಿ ಏರಿಳಿತದ ಲಕ್ಷಣಗಳು ಕಂಡು ಬರುತ್ತಿವೆ. ಇದಕ್ಕೆ ನೀರಿನ ಕೊರತೆಯ ನಡುವೆ ಗುಣಮಟ್ಟವಿಲ್ಲದಿರುವುದು ಸೊಪ್ಪಿನ ಬೆಲೆ ಇಳಿಕೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಕಳೆದ ಮೂರು ತಿಂಗಳಿಂದ ರೇಷ್ಮೆ ಗೂಡಿನ ಜತೆಗೆ ಹಿಪ್ಪು ನೇರಳೆ ಸೊಪ್ಪಿನ ದರವು ಹೆಚ್ಚಾಗಿತ್ತು. ಇದರಿಂದ ಅನೇಕ ರೈತರು ರೇಷ್ಮೆ ಹುಳು ಸಾಕಾಣಿಕೆ ಮತ್ತು ಹಿಪ್ಪು ನೇರಳೆ ಸೊಪ್ಪು ಬೆಳೆದಿದ್ದು, ಇದೀಗ ದರ ಕುಸಿತವೂ ಸಹಜವಾಗಿ ಆತಂಕಕ್ಕೆ ಕಾರಣವಾಗಿದೆ.
14,158 ಹೆಕ್ಟೇರ್‌ನಲ್ಲಿ ಬೆಳೆ: ಜಿಲ್ಲೆಯಲ್ಲಿ ಸುಮಾರು 14,158 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪು ನೇರಳೆ ಸೊಪ್ಪು ಬೆಳೆಯಲಾಗುತ್ತಿದ್ದು, 16000 ರೇಷ್ಮೆ ಬೆಳೆಗಾರರಿದ್ದಾರೆ. ಅತಿ ಹೆಚ್ಚು ಶಿಡ್ಲಘಟ್ಟ ತಾಲೂಕಿನ ರೈತರು ರೇಷ್ಮೆ ಬೆಳೆ ನಂಬಿ ಜೀವನ ನಡೆಸುತ್ತಿದ್ದಾರೆ. ಕರೊನಾ ಸಂದರ್ಭದಲ್ಲಿ ಸತತವಾಗಿ ರೇಷ್ಮೆ ಗೂಡಿನ ಬೆಲೆ ದರ ಇಳಿದ ಪರಿಣಾಮ ಅರ್ಧಕ್ಕರ್ಧದಷ್ಟು ರೈತರು ರೇಷ್ಮೆ ಬೆಳೆ ಬೆಳೆಯಲು ಕೈ ಬಿಟ್ಟಿದ್ದರು.
ಪ್ರಸ್ತುತ ದರದಲ್ಲಿ ಇಳಿಕೆಯಾಗಿದ್ದರೂ ಮುಂಬರುವ ದಿನಗಳಲ್ಲಿ ಬೆಲೆ ಹೆಚ್ಚಳದ ನಿರೀಕ್ಷೆ ಇದೆ. ಪ್ರಸ್ತುತ ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಭೂಮಿಯಲ್ಲಿ ತೇವಾಂಶವಿಲ್ಲದೆ ಎಲೆಯಲ್ಲಿನ ನೀರಿನ ಅಂಶವನ್ನೆಲ್ಲಾ ಗಾಳಿ ಹೀರಿಕೊಳ್ಳುತ್ತಿದೆ. ಹೀಗಾಗಿ ಸೊಪ್ಪು ಕೂಡ ಸತ್ವಹೀನವಾಗುತ್ತಿದೆ. ಇದಕ್ಕೆ ಗುಣಮಟ್ಟವಿಲ್ಲದ ಸೊಪ್ಪಿನ ಬೆಲೆ 600ರಿಂದ 650 ರೂ. ವರೆಗೆ ಮಾರಾಟವಾಗುತ್ತಿದ್ದರೆ, ಉತ್ಕೃಷ್ಟ ಹಿಪ್ಪುನೇರಳೆ ಸೊಪ್ಪಿನ ಒಂದು ಮೂಟೆಯೂ 800 ರೂಪಾಯಿಗೆ ಮಾರಾಟವಾಗುತ್ತಿದೆ.
ಗುಣಮಟ್ಟದ ಸೊಪ್ಪಿಗೆ ಬೇಡಿಕೆ: ಬೆಲೆ ಕುಸಿತದ ಮತ್ತು ಸ್ಥಳೀಯವಾಗಿ ಉತ್ಕೃಷ್ಟವಲ್ಲದ ಸೊಪ್ಪಿನ ಪ್ರಮಾಣ ಹೆಚ್ಚಳದ ನಡುವೆ ಗುಣಮಟ್ಟದ ಹಿಪ್ಪು ನೇರಳೆ ಸೊಪ್ಪಿಗೆ ಒಳ್ಳೆಯ ಬೇಡಿಕೆ ಇದೆ. ಇದಕ್ಕೆ ರೈತರು ಸುಮಾರು 20 ಕಿ.ಮೀ ದೂರ ದ್ವಿಚಕ್ರ ವಾಹನಗಳಲ್ಲಿ ತೆರಳಿ ಬೇರೆಡೆಯಿಂದ ಖರೀದಿಸುತ್ತಿದ್ದಾರೆ. ಎಕರೆ ರೇಷ್ಮೆ ತೋಟದಲ್ಲಿ 125ರಿಂದ 150 ರೇಷ್ಮೆ ಮೊಟ್ಟೆ ಮೇಯಿಸಿ ಉತ್ತಮ ಇಳುವರಿಯ ರೇಷ್ಮೆಗೂಡು ಪಡೆಯಲು ರೇಷ್ಮೆ ಹುಳಕ್ಕೆ ಗುಣಮಟ್ಟದ ಸೊಪ್ಪು ಅಗತ್ಯ. 100 ಮೊಟ್ಟೆ ರೇಷ್ಮೆ ಹುಳ ಸಾಕಾಣೆಗೆ ಕನಿಷ್ಠ 35ರಿಂದ 40 ಮೂಟೆ ಹಿಪ್ಪುನೇರಳೆ ಸೊಪ್ಪು ಬೇಕು. 100 ಮೊಟ್ಟೆ ಚಾಕಿ ಹುಳ 3ರಿಂದ 3.5 ಸಾವಿರರಷ್ಟಿದ್ದು ಈಗಾಗಲೇ ಹುಳು ಇದ್ದವರು ಸೊಪ್ಪನ್ನು ಹಾಕಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಿಸಿಲಿನ ತಾಪ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅಗತ್ಯಕ್ಕೆ ತಕ್ಕಂತೆ ಜಿಲ್ಲೆಯಲ್ಲಿ ಉತ್ಕೃಷ್ಟ ರೇಷ್ಮೆ ಸೊಪ್ಪು ಸಿಗುತ್ತಿಲ್ಲ. ಇದಕ್ಕೆ ಬೇರೆಡೆಯಿಂದ ಖರೀದಿಸಿ ತರುತ್ತಿದ್ದೇವೆ. ಯಲುವಹಳ್ಳಿ ಮಂಜುನಾಥ್, ರೇಷ್ಮೆ ಹುಳು ಸಾಕಾಣಿಕೆದಾರ ***** ರೇಷ್ಮೆಗೂಡು ಮತ್ತು ಹಿಪ್ಪು ನೇರಳೆ ಸೊಪ್ಪಿನ ಬೆಲೆಯ ಏರಿಳಿತ ಸಾಮಾನ್ಯ. ಹಿಂದೆ ದುಬಾರಿಯಾಗಿತ್ತು. ಇತ್ತೀಚೆಗೆ ನಿರಂತರವಾಗಿ ಕಡಿಮೆಯಾಗುತ್ತಿದೆ. ಬೇಸಿಗೆಯಲ್ಲಿ ಬೆಳೆದ ಗುಣಮಟ್ಟವಿಲ್ಲದ ಸೊಪ್ಪು ಎಲ್ಲೆಡೆ ಸಿಗುತ್ತದೆ. ಆದರೆ, ಉತ್ಕೃಷ್ಟ ಸೊಪ್ಪಿಗೆ ಬೇಡಿಕೆ ಹೆಚ್ಚಿದೆ. ಅಣಕನೂರು ಶ್ರೀನಿವಾಸ್, ರೇಷ್ಮೆ ಬೆಳೆಗಾರ