ಅರಕಲಗೂಡು: ತಾಲೂಕಿನ ಹಲವೆಡೆ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಮಳೆಗೆ ಮನೆಯ ಛಾವಣಿ ಕುಸಿದಿರುವ ಹಾಗೂ ಗಾಳಿಗೆ ಮನೆಯ ಶೀಟುಗಳು ಹಾರಿಹೋಗಿರುವ ಪ್ರಕರಣ ನಡೆದಿದೆ.
ಪಟ್ಟಣ ಸುತ್ತಮುತ್ತ ಶುಕ್ರವಾರ ಬೆಳಗ್ಗೆಯಿಂದ ಜಿಟಿ ಜಿಟಿ ಸೋನೆ ಮಳೆ ಸುರಿಯಿತು. ಮಳೆಯಿಂದಾಗಿ ವಾರದ ಸಂತೆಗೆ ಬಂದಿದ್ದ ವ್ಯಾಪಾರಿಗಳು ಕಿರಿಕಿರಿ ಅನುಭವಿಸಿದರು.
ತಾಲೂಕಿನ ತೇಜೂರು ಗ್ರಾಮದ ಜವರಮ್ಮ ಅವರ ಮನೆಯ ಅಡುಗೆ ಕೋಣೆಯ ಛಾವಣಿ ಶುಕ್ರವಾರ ಬೆಳಗ್ಗೆ ಕುಸಿದಿದೆ. ಆ ವೇಳೆ ಅಲ್ಲಿ ಯಾರೂ ಇರದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಗ್ರಾಮಲೆಕ್ಕಾಧಿಕಾರಿ ಸಲ್ಮಾನ್ ಖಾನ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ಪಟ್ಟಣ ವ್ಯಾಪ್ತಿಯ ಸುಭಾಷ್ ನಗರದ ಗೋಪಿ ಎಂಬುವರು ತಮ್ಮ ಜಮೀನಿನ ಬಳಿ ನಿರ್ಮಿಸಿಕೊಂಡಿರುವ ಮನೆಯ ಶೀಟುಗಳು ಗುರುವಾರ ಸಂಜೆ ಗಾಳಿಗೆ ಹಾರಿ ಹೋಗಿವೆ. ಗ್ರಾಮ ಲೆಕ್ಕಾಧಿಕಾರಿ ವಿನಾಯಕ ಹಿರೇಮಠ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚೇತರಿಕೆ: ಕಳೆದ ಮೂರು ದಿನಗಳಿಂದ ಬೀಳುತ್ತಿರುವ ಮಳೆ ಬಾಡುತ್ತಿದ್ದ ಬೆಳೆಗಳಿಗೆ ಚೇತರಿಕೆ ನೀಡಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿದೆ. 15 ದಿನಗಳಿಂದ ಮಳೆ ಬೀಳದೆ ಬೇಸಿಗೆಯಂತೆ ಬಿಸಿಲು ಸುಡುತ್ತಿದ್ದ ಕಾರಣ ಬಿತ್ತನೆಯಾಗಿದ್ದ ಬೆಳೆಗಳು ತೇವಾಂಶದ ಕೊರತೆಯಿಂದ ಬಾಡಲಾರಂಭಿಸಿದ್ದವು. ಈಗ ಬೀಳುತ್ತಿರುವ ಮಳೆಯು ಬೆಳೆಗಳಿಗೆ ಸಂಜೀವಿನಿಯಾಗಿದ್ದು, ಮುಸುಕಿನ ಜೋಳ, ತಂಬಾಕು, ಆಲೂಗಡ್ಡೆ, ಶುಂಠಿ, ದ್ವಿದಳ ಧಾನ್ಯಗಳು ಸೇರಿದಂತೆ ವಿವಿಧ ಬೆಳೆಗಳು ಚೇತರಿಕೆ ಕಾಣುತ್ತಿದ್ದು, ರೈತರ ಮೊಗದಲ್ಲಿ ಸಂತಸ ಮೂಡಿದೆ. ಮಳೆಗಾಗಿ ಕಾದು ಕುಳಿತ್ತಿದ್ದ ರೈತಾಪಿ ವರ್ಗದವರು ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ತಾಲೂಕಿನ ಮಳೆ ಮಾಪನ ಕೇಂದ್ರಗಳಲ್ಲಿ ಶುಕ್ರವಾರ ಬೆಳಗ್ಗೆ ದಾಖಲಾಗಿದ್ದ ಮಳೆ ವಿವರ ಹೀಗಿದೆ. ಅರಕಲಗೂಡು 11.3 ಮಿ. ಮೀ., ಮಲ್ಲಿಪಟ್ಟಣ 17. 2 ಮಿ.ಮೀ., ದೊಡ್ಡಮಗ್ಗೆ 8.8 ಮಿ.ಮೀ, ಬಸವಾಪಟ್ಟಣ 5.8 ಮಿ.ಮೀ, ದೊಡ್ಡಬೆಮ್ಮತ್ತಿ 6.2 ಮಿ.ಮೀ, ಕೊಣನೂರು 6.0 ಮಿ.ಮೀ, ರಾಮನಾಥಪುರ 7.5 ಮಿ.ಮೀ ಮಳೆಯಾಗಿದೆ.