ಚಿತ್ರದುರ್ಗ: ಕುಷ್ಠ ರೋಗಕ್ಕೆ ಸೂಕ್ತ ಚಿಕಿತ್ಸೆ ಇರುವುದರಿಂದ ರೋಗಿಗಳು ಆತಂಕ ಪಡಬೇಕಿಲ್ಲ ಎಂದು ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಡಾ. ಜಿ.ಒ. ನಾಗರಾಜ್ ಹೇಳಿದರು.
ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಕಚೇರಿ, ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಚರ್ಮರೋಗ ತಪಾಸಣೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕುಷ್ಠ ರೋಗ ಶಾಪ-ಪಾಪದಿಂದ ಬರುವ ರೋಗವಲ್ಲ, ಇದು ಸಾಂಕ್ರಾಮಿಕ. ಲಿಂಗ ಭೇದವಿಲ್ಲದೆ ಯಾರಿಗಾದರೂ ಬರಬಹುದು. ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗಹುದು. ಚಿಕಿತ್ಸೆ ಪಡೆಯದಿದ್ದರೆ ಅಂಗವಿಕಲತೆ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಪ್ರಮುಖವಾಗಿದೆ ಎಂದರು.
ಸಮುದಾಯ ಆರೋಗ್ಯ ಕೇಂದ್ರದ ಡಾ.ಎಸ್. ಗೌರಿ, ಬಸವೇಶ್ವರ ವೈದ್ಯಕೀಯ ಆಸ್ಪತ್ರೆ ಚರ್ಮ ರೋಗ ವಿಭಾಗದ ಡಾ.ಎಸ್.ಆರ್. ದರ್ಶಿನಿ, ಜಿಲ್ಲಾ ಕುಷ್ಠ ರೋಗ ನಿವಾರಣಾಧಿಕಾರಿ ಕಚೇರಿ ಮೇಲ್ವಿಚಾರಕ ಎಂ. ಚಂದ್ರಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ, ಫಾರ್ಮಾಸಿ ಅಧಿಕಾರಿ ಅಪ್ರೋಜ್ ಪಾಷಾ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಚೈತ್ರಾ, ಮಮತಾ ಮತ್ತಿತರರು ಇದ್ದರು.