ಜಿಲ್ಲೆ

ಕುಶಾಲನಗರ ಗಣಪತಿ ರಥೋತ್ಸವಕ್ಕೆ ಸಿದ್ಧತೆ

ಕುಶಾಲನಗರ: ಇಲ್ಲಿನ ಪುರಾತನ ಶ್ರೀ ಗಣಪತಿ ದೇವಸ್ಥಾನದ ರಥೋತ್ಸವ ನ.12ರಂದು ಜರುಗಲಿದ್ದು, ಪಟ್ಟಣದಲ್ಲಿ ಜಾತ್ರಾ ಮಹೋತ್ಸವದ ಸಂಭ್ರಮ ಮನೆ ಮಾಡಿದೆ.
ಗಣಪತಿ ದೇವಾಲಯ, ಬಿ.ಎಂ.ರಸ್ತೆ, ರಥ ಬೀದಿ, ಐಬಿ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಪಟ್ಟಣ ಮದುವಣಗಿತ್ತಿಯಂತೆ ಕಂಗೊಳಿಸುತ್ತಿದೆ. ಜಾತ್ರಾ ಮೈದಾನದಲ್ಲಿ ಪ್ರತಿ ವರ್ಷದಂತೆ ಮನೋರಂಜನಾ ಕಾರ್ಯಕ್ರಮಗಳಿರಲಿದ್ದು, 5 ಎಕರೆ ವಿಶಾಲ ಪ್ರದೇಶದಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ.


ನ.12ರಂದು ಮಧ್ಯಾಹ್ನ 12 ಗಂಟೆಗೆ ಅಭಿಜನ್ ಲಗ್ನದಲ್ಲಿ ರಥೋತ್ಸವ ಜರುಗಲಿದೆ. ದೇವರಿಗೆ ಪಂಚಾಮೃತ ಅಭಿಷೇಕ, ಏಕವಾರ, ರುದ್ರಾಭಿಷೇಕ, ಪುಷ್ಪಾಲಂಕಾರ, ರಥಪೂಜೆ ನೆರವೇರಲಿದೆ. ಬಳಿಕ ದೇವರನ್ನು ತೇರಿನಲ್ಲಿ ಪ್ರತಿಷ್ಠಾಪಿಸಿ, ರಥೋತ್ಸವಕ್ಕೆ ಚಾಲನೆ ನೀಡಲಾಗುವುದು.


ಪೂಜಾ ಕೈಂಕರ್ಯ: ಜಾತ್ರಾ ಮಹೋತ್ಸವ ಅಂಗವಾಗಿ ನ.10ರಂದು ಮೂಷಿಕ ವಾಹನ ಉತ್ಸವ, 11ರಂದು ಚಂದ್ರ ಬಿಂಬೋತ್ಸವ, 12ರಂದು ಪಲ್ಲಕ್ಕಿ ಉತ್ಸವ, 13ರಂದು ಮಂಟಪೋತ್ಸವ, 14ರಂದು ಹೂವಿನ ಪಲ್ಲಕ್ಕಿ ಮಂಟಪೋತ್ಸವ, 15ರಂದು ಅಂದೊಲಿಕೋತ್ಸವ, 16ರಂದು ಕಾವೇರಿ ನದಿಯಲ್ಲಿ ತೆಪ್ಪೋತ್ಸವ ನಡೆಯಲಿದೆ. 17ರಂದು ಸ್ವಾಮಿಗೆ ಕಾವೇರಿ ನದಿ ತೀರದಲ್ಲಿ ಪವಿತ್ರ ತೀರ್ಥಸ್ನಾನ, ಪಂಚಾಮೃತ ಅಭಿಷೇಕ, ರಕ್ಷಾ ಬಂಧನ ವಿಮೋಚನೆ, ಧ್ವಜಾ ಅವರೋಹಣ, ಅವಭೃತ ಸ್ನಾನ, ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನೆರವೇರಲಿದೆ.

18ರಂದು ಸಂಪ್ರೋಕ್ಷಣಾ ಪೂರ್ವಾಂಗ ಹೋಮ, ಪಂಚಗವ್ಯಶುದ್ಧಿ ದೇವಾಲಯ ಗೋಪುರ ಸಂಪ್ರೋಕ್ಷಣಾ, ಮಹಾಮಂಗಳಾರತಿಯೊಂದಿಗೆ ವಿನಿಯೋಗ ಋತ್ವಿಕ್ ಸಂಭಾವನೆ ಹಾಗೂ ಆಶೀರ್ವಾದದೊಂದಿಗೆ ರಥೋತ್ಸವದ ಪೂಜಾ ವಿಧಿ-ವಿಧಾನಗಳು ಮುಕ್ತಾಯಗೊಳ್ಳಲಿವೆ.
ಅನ್ನಸಂತರ್ಪಣೆ: ಕೆ.ಎನ್.ಸುರೇಶ್ ನೇತೃತ್ವದ ತಂಡ ಭಕ್ತರಿಂದ ದೇಣಿಗೆ ಸಂಗ್ರಹಿಸಿ ರಥೋತ್ಸವದಂದು ಅನ್ನಸಂತರ್ಪಣೆ ಏರ್ಪಡಿಸಿದೆ.