ಜಿಲ್ಲೆ

ಕುಶಲ ಕಲೆಗಳ ಮುಂದುವರಿಕೆಗೆ ಆಸಕ್ತಿ ವಹಿಸಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿಶ್ವ ಕರ್ಮರು ವಿಶ್ವದ ಮೊದಲ ಶಿಲ್ಪಿಗಳು. ಅವರ ಕ್ರಿಯಾಶೀಲತೆ, ಸೃಜನಶೀಲತೆ ವಿಶೇಷವಾದದ್ದು. ಆದರೆ ಎಲ್ಲ ರಂಗದಲ್ಲೂ ಇಂದಿನ ವಿಜ್ಞಾನ, ತಂತ್ರಜ್ಞಾನಗಳ ಬೆಳವಣಿಗೆಯಿಂದ ಸಮುದಾಯದ ಸೃಜನಶೀಲತೆ, ಕ್ರಿಯಾಶೀಲತೆ ಮರೆಯಾಗುತ್ತಿದೆ ಎಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಹೇಳಿದರು.
ನಗರದ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಭಗವಾನ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಸಮುದಾಯದ ಶ್ರಮದಿಂದ ಅನೇಕ ಐತಿಹಾಸಿಕ ಸ್ಮಾರಕಗಳು, ಮಂದಿರಗಳು, ದೇವತಾ ಶಿಲ್ಪಗಳು ರೂಪಗೊಂಡಿವೆ. ಸಮಯ ಪ್ರಜ್ಞೆ, ಸೂಕ್ಷ್ಮತೆ, ಕೌಶಲ ಮತ್ತು ಅವರ ಕೆತ್ತನೆಯ ಭಕ್ತಿಯಿಂದ ಅನೇಕ ಅಪರೂಪದ ಕಲಾಕೃತಿಗಳು ಸೃಷ್ಟಿಯಾಗಿವೆ. ಸ್ವತಃ ಚಿಂತನೆಯಲ್ಲಿ ತೊಡಗದೆ, ಎಲ್ಲದಕ್ಕೂ ಕಂಪ್ಯೂಟರ್ ಅವಲಂಬಿಸಿ ತಮ್ಮ ವೃತ್ತಿ ಮಾಡಲು ಪ್ರಯತ್ತಿಸುತ್ತಾರೆ. ಇದು ವಿಶ್ವಕರ್ಮ ಸಮುದಾಯದವರ ವೃತ್ತಿಗೂ ಬಂದು ನಿಂತಿದೆ. ಕಟ್ಟಿಗೆ, ಕಲ್ಲು, ಆಭರಣಗಳ ಮೇಲಿನ ಸೂಕ್ಷ್ಮ, ಮನೋಜ್ಞವಾದ ಕೆತ್ತನೆ ಕಣ್ಮರೆ ಆಗುತ್ತಿವೆ ಎಂದರು.
ಕಲಾಕೃತಿಗಳಿಗೆ ಜೀವಕಳೆ ತುಂಬುವ, ಸೌಂದರ್ಯ, ಶೃಂಗಾರ ತೊಡಿಸುವ ಚಾಣಾಕ್ಷತೆ ವಿಶ್ವಕರ್ಮ ಸಮುದಾಯದವರಿಗೆ ರಕ್ತಗತವಾಗಿ ಬಂದಿರುತ್ತದೆ. ನಮ್ಮ ನಾಡಿ ಕಲೆ, ಚಿತ್ರಕಲೆ, ಶಿಲ್ಪಕಲೆ, ಸ್ಮಾರಕಗಳ ರಚನೆಯನ್ನು ಅವಲೋಕಿಸಿದಾಗ ನಮ್ಮ ನಾಡಿನ ಸಾಂಸ್ಕೃತಿಕ ಶ್ರೀಮಂತಿಕೆಯ ಅರಿವು ಮೂಡುತ್ತದೆ ಎಂದರು.
ಜೆಎಸ್‌ಎಸ್ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜೇಂದ್ರ ಪತ್ತಾರ ರಾಷ್ಟ್ರಕ್ಕೆ ವಿಶ್ವಕರ್ಮ ಸಮುದಾಯ ನೀಡಿದ ಕಲೆ, ಸ್ಮಾರಕ, ಸಾಂಸ್ಕೃತಿಕ ಕೊಡುಗೆಗಳ ಕುರಿತು ಉಪನ್ಯಾಸ ನೀಡಿದರು. ಸಹಾಯಕ ಪೊಲೀಸ್ ಆಯುಕ್ತ ವಿನೋದ ಮುಕ್ತೇದಾರ, ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕಾಳಪ್ಪ ಬಡಿಗೇರ, ವಿಶ್ವಕರ್ಮ ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿಠ್ಠಲ ಕಮ್ಮಾರ, ಸಮಾಜದ ಮುಖಂಡರಾದ ವಸಂತ ಅರ್ಕಾಚಾರ, ಸಂತೋಷ ಬಡಿಗೇರ, ನಿರಂಜನ ಬಡಿಗೇರ, ಪದ್ಮಾವತಿ ಪತ್ತಾರ, ಇತರರು ಇದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ರವಿ ಕುಲಕರ್ಣಿ ನಿರೂಪಿಸಿದರು.