ಜಿಲ್ಲೆ

ಕುವೆಂಪುರವರು ವಿದ್ಯೆ ಮುಖೇನ ತಮ್ಮನ್ನು ವಿಶ್ವದಾದ್ಯಂತ ಗುರುತಿಸಿಕೊಂಡವರು

ಹಾಸನ: ಇಂದಿನ ವಿದ್ಯಾರ್ಥಿಗಳು ಮುಂದಿನ ಭವಿಷ್ಯ ರೂಪಿಸಿಕೊಳ್ಳಲು ಉತ್ತಮವಾದ ಬದುಕು ಕಟ್ಟಿಕೊಳ್ಳಲು ಕೆಲಸದ ಅವಶ್ಯಕತೆ ಇದೆ. ಕೆಲಸ ದೊರೆಯಲು ವಿದ್ಯೆಯ ಪಾತ್ರ ಬಹು ಅಗಾಧವಾಗಿದೆ. ಕೆಳವರ್ಗದಿಂದ ಬಂದ ಕುವೆಂಪುರವರು ವಿದ್ಯೆ ಮುಖೇನ ತಮ್ಮನ್ನು ವಿಶ್ವದಾದ್ಯಂತ ಗುರುತಿಸಿಕೊಂಡವರು ಎಂದು ಕನ್ನಡ ವಿಭಾಗದ ಅಧ್ಯಾಪಕ ಡಾ.ಕೆ.ಎಸ್.ದಿನೇಶ್ ತಿಳಿಸಿದರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಸ್ವಾಯತ್ತ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಕನ್ನಡ ವಿಭಾಗದ ಕುವೆಂಪು ಸಾಹಿತ್ಯ ವೇದಿಕೆ ವತಿಯಿಂದ ಆಯೋಜಿಸಿದ್ದ ವಿಶ್ವಮಾನವ ರಾಷ್ಟ್ರಕವಿ ಕುವೆಂಪು ಅವರ 119ನೇ ಜನ್ಮ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಇಂದಿನ ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗದೆ ಭತ್ತ ಬೆಳೆಯುವ ಗದ್ದೆಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಸುಮಾರು ಒಂಭೈನೂರಕ್ಕೂ ಹೆಚ್ಚು ಕವಿತೆಗಳನ್ನು ರಚಿಸಿದ ಅವರ ಬರಹ ಅನಾಥ ಹೆಣ್ಣು ಮಕ್ಕಳನ್ನು, ಕೃಷಿಯನ್ನು, ರೈತರನ್ನು ಹೀಗೆ ನಾನಾ ವಿಚಾರಗಳನ್ನು ಒಳಗೊಂಡಂತಹ ಬರವಣಿಗೆಯಾಗಿದ್ದು, ಇಂದು ನಾವೆಲ್ಲರೂ ಹಾಡುತ್ತಿರುವ ರೈತ ಗೀತೆ, ನಾಡಗೀತೆ ಸಹ ಅವರ ರಚನೆಯದ್ದೇ ಆಗಿದೆ. ಅಷ್ಟೇ ಅಲ್ಲದೆ ಅವರ ಕಾನೂರು ಹೆಗ್ಗಡತಿ ಸಾಹಿತ್ಯವೂ ಸಿನಿಮಾ ಆಗಿ ಹೊರ ಬಂದಿದ್ದು ಹೆಮ್ಮೆಯ ವಿಚಾರವಾಗಿದೆ ನಾವು ಅವರಂ ೆ ಬಾಳಬೇಕು ಎಂದರು.

ಕುವೆಂಪು ಅವರ ಬರಹ ಕಲ್ಪನೆಗೂ ನಿಲುಕಲಾರದ್ದಾಗಿದ್ದು, ಓದುಗರಲ್ಲಿ ರೋಮಾಂಚನಕಾರಿ ಬದಲಾವಣೆಗಳಾಗುವುದನ್ನುಮನಗಾಣಬಹುದು. ಆದ್ದರಿಂದಲೇ ಅವರ ಬರವಣಿಗೆಯ ಸಣ್ಣ ವಿಚಾರವೂ ಸಹ ಅವರನ್ನು ದೊಡ್ಡ ಕವಿಯಾಗಿ ಮಾಡಿದೆ ಎಂದು ಭಾಸವಾಗುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಪಿ.ಪುಟ್ಟರಾಜು ಮಾತನಾಡಿ, ಕಾಲೇಜಿನಲ್ಲಿ ವಿಶ್ವಮಾನವ ಕುವೆಂಪು ಅವರ ಪ್ರತಿಮೆಯನ್ನು ಅನಾವರಣಗೊಳಿಸುವುದು ಇವತ್ತಿನ ಮುಖ್ಯ ಧ್ಯೇಯವಾಗಿತ್ತು. ತಾಂತ್ರಿಕ ಕಾರಣಗಳಿಂದ ಇಂದು ಅದನ್ನು ಅನಾವರಣಗೊಳಿಸಲು ಸಾಧ್ಯವಾಗಲಿಲ್ಲ ಎಂದು ಭಾವುಕರಾದರು. ಸಾಹಿತ್ಯಾಸಕ್ತರೆಲ್ಲರೂ ವಿಶ್ವಮಾನವ ಕುವೆಂಪು ಅವರನ್ನು ಆರಾಧ್ಯ ದೈವವಾಗಿ ಕಾಣುತ್ತಾರೆ ಅದರಲ್ಲಿ ನಾನು ಒಬ್ಬ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶೈಕ್ಷಣಿಕ ಡೀನ್ ಡಾ.ಎಂ.ಬಿ.ಇರ್ಷಾದ್, ಪರೀಕ್ಷಾ ನಿಯಂತ್ರಕ ಡಾ.ಕೆ.ಡಿ.ಮುರುಳೀಧರ, ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಚ್.ಡಿ.ದೇವರಾಜು , ಪ್ರೊ.ಅನುರಾಧ, ಪ್ರೊ.ಪ್ರಮೀಳಾ, ಪ್ರೊ.ಶ್ರೀನಿವಾಸ್, ಪ್ರೊ.ರಂಗಸ್ವಾಮಿ, ರಶ್ಮಿ ಎ.ವಿ. ಅರಕಲಗೂಡು, ವಿದ್ಯಾರ್ಥಿಗಳು ಇತರರು ಇದ್ದರು