ಜಿಲ್ಲೆ

ಕುವೆಂಪು ನಾಡಿನ ಶ್ರೇಷ್ಠ ಸಾಹಿತಿ

ಚಿತ್ರದುರ್ಗ: ರಾಷ್ಟ್ರಕವಿ ಕುವೆಂಪು ಜನ್ಮದಿನದ ಅಂಗವಾಗಿ ಡಿ.29ರ ಬೆಳಗ್ಗೆ 11ಕ್ಕೆ ನಗರದ ತರಾಸು ರಂಗಮಂದಿರದಲ್ಲಿ ವಿಶ್ವಮಾನವ ದಿನವನ್ನು ಆಚರಿಸಲಾಗುತ್ತಿದೆ ಎಂದು ಉಪವಿಭಾಗಾಧಿಕಾರಿ ಆರ್.ಕಾರ್ತಿಕ್ ಹೇಳಿದರು.
ಜಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಗುವುದು ಎಂದು ತಿಳಿಸಿದರು.
ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು ಅವರು ನಾಡಿನ ಶ್ರೇಷ್ಠ ಸಾಹಿತಿಯಾಗಿದ್ದಾರೆ. ಅವರ ತತ್ವಗಳನ್ನು ಸಾರುವ ನಿಟ್ಟಿನಲ್ಲಿ ಅವರ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ಸಮಾರಂಭದಲ್ಲಿ ಗೀತಗಾಯನ ಕಾರ್ಯಕ್ರಮವಿರುತ್ತದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಕೆ.ಮಲ್ಲಿಕಾರ್ಜುನ ಮಾತನಾಡಿ, ಕುವೆಂಪು ಕುರಿತು ಪ್ರೌಢಶಾಲೆ, ಪಿಯು, ಪದವಿ ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ತಿಳಿಸಿದರು.
ಆಸಕ್ತರು ಮುಖ್ಯಶಿಕ್ಷಕರು, ಪ್ರಾಚಾರ‌್ಯರ ಮೂಲಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ, ಡಿಡಿಪಿಐ, ಪಿಯು ಉಪನಿರ್ದೇಶಕರ ಕಚೇರಿ ಅಥವಾ ನಗರದ ಸರ್ಕಾರಿ ಕಲಾ ಕಾಲೇಜು ಮುಖ್ಯಸ್ಥರನ್ನು ಸಂಪರ್ಕಿಸಬಹುದು. ವಿಜೇತರಿಗೆ ಸಮಾರಂಭದಲ್ಲಿ ನಗದು ಬಹುಮಾನ ನೀಡಿ ಪುರಸ್ಕರಿಸಲಾಗುವುದು ಎಂದು ಹೇಳಿದರು.
ಕೃಷಿ ಇಲಾಖೆ ಉಪನಿರ್ದೇಶಕ ನಟರಾಜ್, ಸಮಾಜ ಕಲ್ಯಾಣ ಇಲಾಖೆ ಪತ್ರಾಂಕಿತ ಸಹಾಯಕ ಹರೀಶ್, ಶಿಕ್ಷಣ ಇಲಾಖೆ ಚಿದಾನಂದ ಸ್ವಾಮಿ ಮತ್ತಿತರ ಅಧಿಕಾರಿಗಳಿದ್ದರು.