ಅರಸೀಕೆರೆ: ವಿಶ್ವಮಾನವ ಸಂದೇಶ ಸಾರಿದ ಕುವೆಂಪು ಕೃತಿಗಳು ಓದುಗರ ಮನಸೂರೆಗೊಂಡಿವೆ ಎಂದು ವೈದ್ಯ ಡಾ.ಶಿವಕುಮಾರ್ ಬಣ್ಣಿಸಿದರು.
ತಾಲೂಕು ಒಕ್ಕಲಿಗರ ಸಂಘ, ನೌಕರರ ಸಂಘ ಹಾಗೂ ಭೈರವ ಯುವಕ ಸಂಘದ ವತಿಯಿಂದ ನಗರದ ಹೊರವಲಯದ ಕಸ್ತೂರಬಾ ಶಿಬಿರದ ಆವರಣದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು 118ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿ ಮಾತನಾಡಿದರು.
ಕುವೆಂಪು ಕಾವ್ಯವೆಂದರೆ ಓದುಗರ ಮನಸ್ಸಿಗೆ ತಂಪು, ಕೇಳುವ ಕಿವಿಗೆ ಇಂಪು, ಪದ್ಯವನ್ನೋದುವ ಹೃದಯಕ್ಕೆ ಕಂಪಿನ ಜತೆಗೆ ದಿನ ನಿತ್ಯದ ದುಡಿಮೆಗೆ ಸ್ಫೂರ್ತಿಯ ಸೆಲೆಯಾಗಿವೆ. ವಿದ್ಯಾರ್ಥಿಗಳ ಭವಿಷ್ಯ ಮನಗಂಡು ಮಾನಸಗಂಗೋತ್ರಿಯ ಕನಸು ನನಸಾಗಿಸಿದ ಕೀರ್ತಿ ಕೆ.ವಿ.ಪುಟ್ಟಪ್ಪಗೆ ಸಲ್ಲುತ್ತದೆ ಎಂದು ಗುಣಗಾನ ಮಾಡಿದರು.
ಹಾಸನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ಕುವೆಂಪು ರಚಿತ ಕಥೆ ಕವನ ಗ್ರಂಥಗಳು ಬುದ್ಧಿಗಿಂತ ಹೃದಯದಿಂದ ಪ್ರಕಟಗೊಂಡಿವೆ ಎಂದರೆ ಅತಿಶಯೋಕ್ತಿ ಎನಿಸಲಾರದು. ಅವರ ಕಥೆ, ಕವನ, ಕಾದಂಬರಿ, ಜೀವನ ಚರಿತ್ರೆ, ಪ್ರವಾಸ ಕಥನ, ನಾಟಕ ಒಳಗೊಂಡಂತೆ ಎಲ್ಲ ಕೃತಿಗಳು ಸರ್ವಕಾಲಕ್ಕೂ ಜ್ಞಾನದ ಭಂಡಾರವಾಗಿವೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು.
ಸಾಹಿತಿ ಪ್ರೊ.ಹಂಪ ನಾಗರಾಜಯ್ಯ ಮಾತನಾಡಿ, ನಾಡಪ್ರೇಮದ ಹಿನ್ನೆಲೆಯಲ್ಲಿ ನಾಡಗೀತೆ ರಚಿಸಿದರೆ, ರೈತನ ಬದುಕಿನ ಕ್ಷಣಗನ್ನು ರೈತ ಗೀತೆ ಮೂಲಕ ನಿತ್ಯ ಸ್ಮರಣೀಯವಾಗಿಸಿದ ಧೀಮಂತ ಕವಿಯ ಸ್ಮರಣೆ ನಿಜಕ್ಕೂ ಅರ್ಥಪೂರ್ಣ ಎಂದು ಗುಣಗಾನ ಮಾಡಿದರು. ಶಾಸಕ ಕೆ.ಎಂ ಶಿವಲಿಂಗೇಗೌಡ ಮಾತನಾಡಿದರು.
ಸಮಾರಂಭದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಅಶೋಕ ಹಾರನಹಳ್ಳಿ, ಕರವೇ ಅಧ್ಯಕ್ಷ ಟಿ.ಎ ನಾರಾಯಣಗೌಡ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವೈದ್ಯ ಡಾ.ಶಿವಕುಮಾರ್, ಶಿಕ್ಷಕಿ ಕುಸುಮಾ, ಶಿಲ್ಪಿ ಗಣಪತಿ ಮಹದೇವ್, ಸಮಾಜ ಸೇವಕ ಸಿದ್ದಪ್ಪ, ಪ್ರಗತಿಪರ ರೈತ ಮಹಾದೇವರಹಳ್ಳಿ ಗಂಗಣ್ಣಗೌಡರನ್ನು ಸನ್ಮಾನಿಸಿ ಗೌರವಿಸಲಾಯಿತು.
ಆದಿಚುಂಚನಗಿರಿ ಶಾಖ ಮಠದ ಶಿವಪುತ್ರನಾಥ ಸ್ವಾಮೀಜಿ, ನಗರಸಭೆ ಅಧ್ಯಕ್ಷ ಸಿ.ಗಿರೀಶ್, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ್, ನಗರ ಯೋಜನಾ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕಾಟಿಕೆರೆ ಪ್ರಸನ್ನಕುಮಾರ್, ಕಸಾಪ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್ ಮಲ್ಲೇಶ್‌ಗೌಡ, ನಾಡಪ್ರಭು ಕೆಂಪೇಗೌಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ ಚಂದ್ರಶೇಖರಯ್ಯ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಎಸ್.ರಘು ಗೌಡ, ತಾಲೂಕು ಒಕ್ಕಲಿಗರ ಸಮಾಜದ ಅಧ್ಯಕ್ಷ ಆರ್.ಅನಂತಕುಮಾರ್ ಸೇರಿ ಹಲವು ಮುಖಂಡರು ವೇದಿಕೆಯಲ್ಲಿದ್ದರು. ಆದಿಚುಂಚನಗಿರಿ ಹಾಗೂ ಅನಂತ ಇಂಟರ್‌ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನಸೂರೆಗೊಂಡವು.