ಜಿಲ್ಲೆ

ಕುಲಶಾಸ್ತ್ರ ಅಧ್ಯಯನಕ್ಕೆ 25 ಲ್ಷ ರೂ.

ಗೋಣಿಕೊಪ್ಪ: ಹದಿನೆಂಟು ಕೊಡವ ಭಾಷಾ ಮೂಲ ನಿವಾಸಿಗಳ ಕುಲಶಾಸ್ತ್ರ ಅಧ್ಯಯನಕ್ಕೆ ರಾಜ್ಯ ಸರ್ಕಾರದಿಂದ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಭರವಸೆ ನೀಡಿದರು.

ಸಮೀಪದ ಬಿಟ್ಟಂಗಾಲದಲ್ಲಿರುವ ಕೊಡಗು ಹೆಗ್ಗಡೆ ಸಮಾಜ ಸಭಾಂಗಣದಲ್ಲಿ ಭಾನುವಾರ ಕೊಡವ ಭಾಷಿಕ ಸಮುದಾಯಗಳ ಕೂಟ ಆಯೋಜಿಸಿದ್ದ 18 ಕೊಡವ ಭಾಷಿಕ ಜನಾಂಗಗಳ ಒತ್ತೋರ‌್ಮೆ ಕೂಟದಲ್ಲಿ ವಸ್ತುಪ್ರದರ್ಶನ ಉದ್ಘಾಟಿಸಿ, ಮನವಿ ಸ್ವೀಕರಿಸಿ ಮಾತನಾಡಿದರು.

ಕಡಿಮೆ ಜನಸಂಖ್ಯೆಯೊಂದಿಗೆ ಸರ್ಕಾರದ ಮಟ್ಟದಲ್ಲಿ ಹೆಚ್ಚು ಗುರುತಿಸಿಕೊಳ್ಳಲಾಗದ ಜನಾಂಗಗಳಿಗೆ ಕುಲಶಾಸ್ತ್ರ ಅಧ್ಯಯನದ ಮೂಲಕ ಮೀಸಲಾತಿ ನೀಡುವ ನಿಯಮವಿದೆ. ಕೊಡವ 18 ಭಾಷಿಕ ಜನಾಂಗಗಳ ಕುಲಶಾಸ್ತ್ರಕ್ಕೆ ಬೇಡಿಕೆ ಇಟ್ಟಿರುವುದನ್ನು ಪರಿಗಣಿಸಿ, ತಕ್ಷಣ ಕ್ರಮಕ್ಕೆ ಆದೇಶ ನೀಡಲಾಗುವುದು. ಇದಕ್ಕಾಗಿ 25 ಲಕ್ಷ ರೂ. ಅನುದಾನ ಬಿಡುಗಡೆ ಮಾಡುವುದಾಗಿ ತಿಳಿಸಿದರು.

ಕೊಡವ ಭಾಷಿಕ ಜನಾಂಗಗಳ ಐನ್‌ಮನೆ ಅಭಿವೃದ್ಧಿಗೆ 5 ಕೋಟಿ ರೂ. ನೀಡಲಾಗುವುದು. ಸಮುದಾಯಕ್ಕೆ ಬೇಕಾಗಿರುವ ಕಲ್ಯಾಣ ಸಮುದಾಯ ಭವನ ನಿರ್ಮಾಣಕ್ಕೆ 5 ಎಕರೆ ಸರ್ಕಾರಿ ಜಾಗ ನೀಡಲು ಸರ್ಕಾರ ಮುಂದಾಗಲಿದೆ. ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರೂ ಆಗಿರುವ ಶಾಸಕ ಕೆ.ಜಿ. ಬೋಪಯ್ಯ ಅವರ ಮೂಲಕ ಬೇಡಿಕೆ ಈಡೇರಿಸಲಾಗುವುದು ಎಂದರು.

ಒಳ ಮೀಸಲಾತಿಗೆ ಸದಾಶಿವ ವರದಿ ಆಧರಿಸಿ ಕ್ರಮ ಕೈಗೊಳ್ಳಲು ಸರ್ಕಾರ ಸಹಮತ ವ್ಯಕ್ತಪಡಿಸಿದೆ. ಅದರಂತೆ ಕೊಡವ ಭಾಷಿಕ ಜನಾಂಗಗಳ ಒಳಮೀಸಲಾತಿ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ದೇಶ ಸಮರ್ಥವಾಗಿ ಮುಂದುವರಿಯಲು ಕೊಡವ ಕೊಡುಗೆ ಹೆಚ್ಚಿದೆ. ಇದನ್ನು ಸರ್ಕಾರ ಅರಿತುಕೊಂಡಿದೆ. ಪದ್ಮಶ್ರೀಯಂತಹ ಪ್ರಶಸ್ತಿಗಳು ಕೂಡ ಇಂದು ಕಲೆ, ಸಂಸ್ಕೃತಿ, ಮೂಲಕ್ಕೆ ದೊರೆಯುತ್ತಿದೆ. ದೇಶ ಬದಲಾಗುತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಮಾತನಾಡಿ, ಸರ್ಕಾರದ ಸವಲತ್ತು ಪಡೆಯಲು ಜನಸಂಖ್ಯೆ ಮುಖ್ಯ, ಒಗ್ಗಟ್ಟಿನ ಮೂಲಕ ಹೋರಾಟ ನಡೆಸಬೇಕಿದೆ ಎಂದರು.

ಮಾಜಿ ಅಡ್ವೊಕೇಟ್ ಜನರಲ್ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮಾತನಾಡಿ, ಕೊಡವ ಕುಲಶಾಸ್ತ್ರ ಅಧ್ಯಯನ ನಡೆಸಲು ಸರ್ಕಾರ 6 ವರ್ಷದಿಂದ ಯೋಜನೆ ರೂಪಿಸಿಕೊಂಡಿದ್ದರೂ ಪ್ರಯೋಜನವಾಗಿಲ್ಲ. ಸಂವಿಧಾನಬದ್ಧವಾಗಿರುವ ಕುಲಶಾಸ್ತ್ರ ಅಧ್ಯಯನ, ಮೀಸಲಾತಿ, ರಾಜಕೀಯ ಮೀಸಲಾತಿ ಬಗ್ಗೆ ಕಾನೂನು ಹೋರಾಟ ಅಗತ್ಯವಾಗಿದೆ. ಕೊಡವ ಕೆಂಬಟ್ಟಿ ಜನಾಂಗವನ್ನು ಆದಿಕರ್ನಾಟಕ ಮೀಸಲಾತಿಗೆ ಸೇರಿಸುವುದು ಸರಿಯಲ್ಲ. ವಿಶೇಷ ಭಾಷೆ, ಆಚಾರ-ವಿಚಾರ ಹೊಂದಿರುವ ಕೆಂಬಟ್ಟಿ ಜನಾಂಗಕ್ಕೆ ಅದರದ್ದೇ ಆದ ಮೀಸಲಾತಿ ಅವಶ್ಯವಿದೆ. ಹೆಗ್ಗಡೆ ಸಮಾಜಕ್ಕೆ ರಾಜಕೀಯ ಮೀಸಲಾತಿ ನೀಡುವುದು, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ 18 ಕೊಡವ ಭಾಷಿಕ ಜನಾಂಗಗಳಿಗೆ ಸದಸ್ಯತ್ವ ನೀಡುವ ಕಾನೂನು ಹೋರಾಟದ ಮೂಲಕ ಸರ್ಕಾರವನ್ನು ಎಚ್ಚರಿಸುವ ಕಾರ್ಯ ನಡೆಸಬೇಕಿದೆ ಎಂದರು.

ಮಂಗಳೂರು ಕ್ಷೇತ್ರದ ಲೋಕಸಭಾ ಸದಸ್ಯರು ಪುಸ್ತಕ ಮಳಿಗೆ ಉದ್ಘಾಟಿಸಿದರು. ಹಂಪಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ತಂಬಂಡ ವಿಜಯ್ ಪೂಣಚ್ಚ, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷ ಡಾ.ಮೇಚೀರ ಸುಭಾಷ್ ನಾಣಯ್ಯ, ಪಶ್ಚಿಮಘಟ್ಟ ಸಂರಕ್ಷಣಾ ಸಮಿತಿ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಸಮಾಜ ಸೇವಕ ಕೆಎಂಬಿ ಗಣೇಶ್, ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟ ಅಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ, ಸದಸ್ಯೆ ಬಬ್ಬೀರ ಸರಸ್ವತಿ, ಖಜಾಂಚಿ ಪಡಿಞರಂಡ ಪ್ರಭುಕುಮಾರ್ ಇದ್ದರು.