ಚಿತ್ರದುರ್ಗ: ಉಪ್ಪಾರ ಸಮುದಾಯವನ್ನು ಪರಿಶಿಷ್ಟ ವರ್ಗಕ್ಕೆ ಸೇರಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಕುಲಶಾಸ್ತ್ರ ಅಧ್ಯಯನದ ವರದಿ ಶೀಘ್ರ ಪೂರ್ಣಗೊಳ್ಳಲಿದ್ದು, ಅದನ್ನು ಸರ್ಕಾರಕ್ಕೆ ತಲುಪಿಸಲು ಎಲ್ಲರ ಸಹಕಾರದ ಅಗತ್ಯವಿದೆ ಎಂದು ಉಪ್ಪಾರ ಮಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ಜಿಲ್ಲಾ ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ನಿವೃತ್ತ ನಿರ್ದೇಶಕ ಪಿ.ಶಿವಶಂಕರ್ ಅವರ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಮೇತ್ರಿ ಹಾಗೂ ಜಗನ್ನಾಥ ಸಾಗರ್ ನೇತೃತ್ವದ ಕುಲಶಾಸ್ತ್ರ ಅಧ್ಯಯನದ ವರದಿ ಶೀಘ್ರ ಅಂತಿಮಗೊಳ್ಳಲಿದ್ದು, ಶೀಘ್ರ ಸರ್ಕಾರಕ್ಕೆ ಸಲ್ಲಿಸಬೇಕಿದೆ ಎಂದರು.
ಸಾಧಕರಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಗೀರಥ ಪ್ರಶಸ್ತಿ ಪ್ರದಾನಕ್ಕೆ ಸಿದ್ಧತೆಗಳಾಗುತ್ತಿವೆ. ಜಿಲ್ಲಾ ಉಪ್ಪಾರ ಸಂಘದಿಂದ ನಗರದಲ್ಲಿ ನಿವೇಶನ ಖರೀದಿಸಲಾಗುತ್ತಿದೆ ಎಂದು ಹೇಳಿದರು.
ಶಿವಶಂಕರ್ ಅವರು ಚಿತ್ರದುರ್ಗ ಜಿಪಂ ಉಪ ಕಾರ‌್ಯದರ್ಶಿಯಾಗಿದ್ದಾಗ ವಿದ್ಯಾರ್ಥಿ ನಿಲಯಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದ ಶ್ರೀಗಳು, 40 ಲಕ್ಷ ರೂ. ವಿದ್ಯಾನಿಧಿ ಮೊತ್ತವನ್ನು ಉಪ್ಪಾರ ಸಮಾಜದ ವಿದ್ಯಾರ್ಥಿಗಳ ಶಿಕ್ಷಣದ ನೆರವಿಗೆ ಬಳಸಲಾಗುವುದು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಶಿವಶಂಕರ್, ತಮ್ಮ ಅಧಿಕಾರವಧಿ ಸಾಕಷ್ಟು ಸಮಸ್ಯೆ ಸವಾಲುಗಳನ್ನು ಎದುರಿಸಿದ್ದೇನೆ ಎಂದರು.
ನಗರದ ವಿದ್ಯಾರ್ಥಿ ನಿಲಯದೊಂದಿಗೆ ಸಮುದಾಯ ಭವನ, ಸಹಕಾರ ಬ್ಯಾಂಕ್ ಹಾಗೂ ಆದಾಯ ಕ್ರೊಢೀಕರಣಕ್ಕೆ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಬೇಕೆಂದು ಸಲಹೆ ನೀಡಿದರು.
ವಿದ್ಯಾರ್ಥಿ ನಿಲಯಗಳಲ್ಲಿ ಓದಿ ಸರ್ಕಾರಿ ಕೆಲಸದಲ್ಲಿರುವವರು ಸಮುದಾಯದ ಪ್ರಗತಿಗೆ ಶ್ರಮಿಸಬೇಕು ಎಂದರು. ಜಿಲ್ಲಾ ಉಪ್ಪಾರ ಧಾರ್ಮಿಕ ಟ್ರಸ್ಟ್ ಕಾರ‌್ಯದರ್ಶಿ ಶಿವಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಎಲ್.ಷಣ್ಮುಖ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಉಪ್ಪಾರ ಸಮಾಜದ ಕಾರ್ಯಾಧ್ಯಕ್ಷ ಲಕ್ಷ್ಮಣ ಉಪ್ಪಾರ್, ರಾಜ್ಯ ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಚಂದ್ರಪ್ಪ, ಉಪಾಧ್ಯಕ್ಷ ಅರ್ಜುನ್ ನಾಯಕ್‌ವಾಡ್, ನಾಗರಾಜ್ ಮಲ್ನಾಡ್, ರಮೇಶ್, ಹನುಮೇಶ್, ಜಿ.ಶರಣಪ್ಪ, ನಳಿನಿ ಪಿ.ಶಿವಶಂಕರ್, ಎನ್.ವೀರೇಶ್ ಮತ್ತಿತರರು ಇದ್ದರು.
ಹರೀಶ್ ಪ್ರಾರ್ಥಿಸಿದರು. ಅಜ್ಜಪ್ಪ ಸ್ವಾಗತಿಸಿದರು. ನಾಗರಾಜ್ ನಿರೂಪಿಸಿದರು.