ಜಿಲ್ಲೆ

ಕುರ್ತಕೋಟಿ ಕಾರ್ಯ ಶ್ಲಾಘನೀಯ

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ತಮ್ಮ ಸೃಜನಶೀಲತೆ ದಾಖಲಿಸಿದ್ದ ಕೀರ್ತಿನಾಥ ಕುರ್ತಕೋಟಿ ಅವರ ರಂಗಭೂಮಿ ಚಿಂತನೆ ಕುರಿತು ಬರೆದಿರುವ ಲೇಖನ, ಕೃತಿಗಳನ್ನು ಇಂದು ಸಮಗ್ರವಾಗಿ ಅಭ್ಯಸಿಸುವ ಅವಶ್ಯಕತೆ ಇದೆ ಎಂದು ಹಿರಿಯ ನಿರ್ದೇಶಕ ಡಾ. ಪ್ರಕಾಶ ಗರುಡ ಅಭಿಪ್ರಾಯಪಟ್ಟರು.
ನಗರದ ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್, ಮನೋಹರ ಗ್ರಂಥಮಾಲೆ ಮತ್ತು ಕೀರ್ತಿನಾಥ ಕುರ್ತಕೋಟಿ ಮೆಮೋರಿಯಲ್ ಟ್ರಸ್ಟ್ ಆಶ್ರಯದಲ್ಲಿ ಸೋಮಾರ ಏರ್ಪಡಿಸಿದ್ದ ಕೀರ್ತಿನಾಥ ಕುರ್ತಕೋಟಿ ಅವರ 20ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಸಂಸ್ಕೃತ, ಜಾನಪದ ನಾಟಕಗಳು ಮತ್ತು ರಂಗಭೂಮಿ, ಆಧುನಿಕ ನಾಟಕಗಳು ಮತ್ತು ರಂಗಭೂಮಿ ಕುರಿತು ಹತ್ತಾರು ಅಭ್ಯಾಸ ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಪ್ರತಿ ಲೇಖನವೂ ರಂಗಭೂಮಿ ಜತೆಗೆ ನಂಟು ಬೆಳೆಸಿಕೊಂಡಿರುವರ ಅಭ್ಯಾಸಕ್ಕೆ ಯೋಗ್ಯವಾಗಿವೆ. ರಂಗಭೂಮಿ ಕುರಿತ ಎಲ್ಲ ಲೇಖನಗಳನ್ನು ಒಂದೇ ಗ್ರಂಥದಲ್ಲಿ ಸಮಗ್ರವಾಗಿ ತರುವುದು ಅಗತ್ಯ. ಅವರು ಬರೆದ ನಾಟಕಗಳು, ಗೀತ ನಾಟಕಗಳು, ಅನುವಾದಗಳು ಸಹ ರಂಗಭೂಮಿ ಚಿಂತನೆಗಳ ಹಿನ್ನೆಲೆಯಲ್ಲಿ ಪರಾಮರ್ಶೆಗೊಳ್ಳಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ. ಕೃಷ್ಣ ಕಟ್ಟಿ ಮಾತನಾಡಿ, ಕುರ್ತಕೋಟಿ ಅವರು ರಂಗಭೂಮಿ, ನಾಟಕಗಳ ಕುರಿತು ಬರೆದ ಎಲ್ಲ ಲೇಖನಗಳನ್ನು ಸಂಗ್ರಹಿಸಿ ಸಮಗ್ರ ಕೃತಿ ಹೊರತರಲು ಪ್ರಯತ್ನಿಸಲಾಗುವುದು ಎಂದರು.
ಜಿ.ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್‌ನ ಡಾ. ರಮಾಕಾಂತ ಜೋಶಿ, ಜಿ.ಸಿ. ತಲ್ಲೂರ, ದುಷ್ಯಂತ ನಾಡಗೌಡ, ರಾಘವೇಂದ್ರ ಪಾಟೀಲ, ಹರ್ಷ ಡಂಬಳ, ವಿನಾಯಕ ನಾಯಕ, ಅರವಿಂದ ಕುಲಕರ್ಣಿ, ಶಂಕರ ಕುಂಬಿ, ಎಸ್.ಆರ್. ಮಾಳಾಪುರ, ಶಶಿಧರ ನರೇಂದ್ರ, ಆನಂದ ಕುಲಕರ್ಣಿ, ಡಾ.ಪ್ರಕಾಶ ಭಟ್, ಎಸ್.ಎನ್. ದೇಶಪಾಂಡೆ, ರಮೇಶ ಕಾಖಂಡಕಿ, ಸಮೀರ ಜೋಶಿ, ವಿಷಯಾ ಜೇವೂರ, ಶ್ರೀದೇವಿ ಜೋಶಿ, ರಾಜು ಪಾಟೀಲ ಕುಲಕರ್ಣಿ, ವಿಶ್ವನಾಥ ಕೋಳಿವಾಡ, ಇತರರು ಇದ್ದರು.
ಡಾ. ಹ.ವೆಂ. ಕಾಖಂಡಕಿ ವಂದಿಸಿದರು.