ಮುದ್ದೇಬಿಹಾಳ ತಾಲೂಕಿನ ಹಿರೇಮುರಾಳದಲ್ಲಿ ನೀಲಕಂಠೇಶ್ವರ ದೇವಸ್ಥಾನದ ಉದ್ಘಾಟನೆ, ಶಿವಲಿಂಗ ಪ್ರಾಣ ಪ್ರತಿಷ್ಠಾಪನೆ, ಕಲಶಾರೋಹಣ ಹಾಗೂ ಲಕ್ಷದೀಪೋತ್ಸವ ಸಮಾರಂಭವನ್ನು ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠ ಮಠದ ಶಿವಶಂಕರ ಶ್ರೀಗಳು ನೆರವೇರಿಸಿದರು. 
ಜಿಲ್ಲೆ

ಕುರುಹಿನಶೆಟ್ಟಿ ಸಮಾಜದ ಅಭಿವೃದ್ಧಿಗೆ ಒಗ್ಗಟ್ಟು ಅಗತ್ಯ

ಮುದ್ದೇಬಿಹಾಳ: ನಮ್ಮ ನಮ್ಮಲ್ಲಿನ ಭಿನ್ನಾಭಿಪ್ರಾಯಗಳು, ಸಂಕುಚಿತ ಮನೋಭಾವಗಳಿಂದ ಹೊರಬಂದು ಜಾಗೃತರಾಗಿ ಸಮಾಜದವರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ಕೇಂದ್ರ ಕುರುಹಿನಶೆಟ್ಟಿ ಸಂಘದ ಉಪಾಧ್ಯಕ್ಷ ಮುರಿಗೆಪ್ಪ ಬನ್ನಿ ಹೇಳಿದರು.

ತಾಲೂಕಿನ ಹಿರೇಮುರಾಳದಲ್ಲಿ ಸೋಮವಾರ ಕುರುಹಿನಶೆಟ್ಟಿ ಸಮಾಜದಿಂದ ಹಮ್ಮಿಕೊಂಡಿದ್ದ ನೀಲಕಂಠೇಶ್ವರ ನೂತನ ದೇವಸ್ಥಾನದ ಉದ್ಘಾಟನೆ, ಶಿವಲಿಂಗ ಪ್ರಾಣ ಪ್ರತಿಷ್ಠಾಪನೆ, ಕಲಶಾರೋಹಣ ಹಾಗೂ ಲಕ್ಷದೀಪೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.

ನಮ್ಮ ಸಮಾಜ ಒಬಿಸಿಯಲ್ಲಿ ಸೇರಿದ್ದರೂ ಸರ್ಕಾರದಿಂದ ಬರುವ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲರಾಗಿದ್ದೇವೆ. ಜಾತಿ ಕಾಲಂನಲ್ಲಿ ಜಾತಿ ಹೆಸರು ಬರೆಯಿಸುವ ಸಂದರ್ಭದಲ್ಲಿ ಆಗುತ್ತಿರುವ ವ್ಯತ್ಯಾಸಗಳಿಂದ ಕೇಂದ್ರ, ರಾಜ್ಯ ಸರ್ಕಾರದ ನೌಕರಿಯಿಂದ ವಂಚಿತರಾಗುತ್ತಿದ್ದೇವೆ. ಜಾತಿ ಕಾಲಂನಲ್ಲಿ ಕುರುಹಿನಶೆಟ್ಟಿ ಎಂದೇ ಬರೆಯಿಸುವ ಕೆಲಸವನ್ನು ಸಮಾಜದವರು ಮಾಡಬೇಕು ಎಂದರು.

ಮುದ್ನೂರದ ಸಿದ್ಧಮಲ್ಲಿಕಾರ್ಜುನ ಶ್ರೀಗಳು ಮಾತನಾಡಿ, ನೀಲಕಂಠೇಶ್ವರ ದೇವರು ಕುರುಹಿನಶೆಟ್ಟಿ ಸಮಾಜಕ್ಕೆ ಅಷ್ಟೇ ಸಿಮೀತವಲ್ಲ. ಇನ್ನುಳಿದ ಸಮಾಜದವರಿಗೂ ಆ ದೇವರ ಆಶೀರ್ವಾದ ದೊರೆಯಲಿ. ಮಠಮಾನ್ಯಗಳ ಕರ್ತವ್ಯ, ಅಜ್ಞಾನ ಹೋಗಲಾಡಿಸಿ ಸುಜ್ಞಾನದತ್ತ ಕೊಂಡೊಯ್ಯುವ ಕಾರ್ಯವಾಗಬೇಕು. ಅಹಂಕಾರದಿಂದ ಬದುಕುಬಾರದು. ದೇವಸ್ಥಾನದ ಪ್ರಾಂಗಣಕ್ಕೆ ಅಗತ್ಯವಾಗಿರುವ ನಿವೇಶನವನ್ನು ಬಾಗೇವಾಡಿ ಕುಟುಂಬ ಟ್ರಸ್ಟ್‌ಗೆ ವಹಿಸಿಕೊಡುವ ಕಾರ್ಯ ಮಾಡಲಿ ಎಂದರು.

ಶಾಸಕ ಸಿ.ಎಸ್. ನಾಡಗೌಡ ಅಪ್ಪಾಜಿ ನೂತನವಾಗಿ ನಿರ್ಮಿಸಲಾದ ದೇವಸ್ಥಾನ ಉದ್ಘಾಟಿಸಿದರು. ಕೆಆರ್ ಪೇಟಿ ಕೆ.ಕೆ.ಜಿ.ಎಸ್ ಸೇವಾಟ್ರಸ್ಟ್‌ನ ಜಿ. ಸೋಮಶೇಖರ, ಶಿಕ್ಷಕ ಎಂ.ಬಿ. ಗುಡಗುಂಟಿ ಮಾತನಾಡಿದರು. ಹಳೇಹುಬ್ಬಳ್ಳಿ ವೀರಭಿಕ್ಷಾವರ್ತಿ ನೀಲಕಂಠ ಮಠದ ಶಿವಶಂಕರ ಶ್ರೀಗಳು, ಅಥರ್ಗಾದ ಈಶಪ್ರಸಾದ ಸ್ವಾಮಿಗಳು, ಕಾಗವಾಡದ ಯತೀಶ್ವರಾನಂದ ಶ್ರೀಗಳು, ಬೂದಿಹಾಳದ ಗಾಂಗೇಯಪಿತ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಶಿವಣ್ಣ ಗುಡಗುಂಟಿ ಶರಣರು ಸಮ್ಮುಖ ವಹಿಸಿದ್ದರು.

ಕುರುಹಿನಶೆಟ್ಟಿ ಸಮಾಜದ ತಾಲೂಕಾಧ್ಯಕ್ಷ ಬಿ.ಎಸ್. ಬಾಗೇವಾಡಿ, ನಿವೃತ್ತ ಇಂಜಿನಿಯರ್ ಬಿ.ಬಿ. ಪಾಟೀಲ, ಮನೋಹರ ಶಿರೋಳ, ವಿವಿಧ ಜಿಲ್ಲೆಗಳ ಸಮಾಜದ ಅಧ್ಯಕ್ಷರಾದ ಆರ್.ಎಚ್. ನಾಗಭೂಷಣ, ಡಾ. ವಿ.ಜಿ. ತೊರವಿ, ಸಿದ್ದಣ್ಣ ಹಳಕಟ್ಟಿ, ಬಸವರಾಜ ಹುನಗುಂದ, ಇಂಜಿನಿಯರ್ ಶಿವಾನಂದ ಅರವಿ, ಗಣ್ಯರಾದ ಚಂದ್ರಶೇಖರ ಬಿರಾದಾರ, ಮಲ್ಲನಗೌಡ ಪಾಟೀಲ, ಅಕ್ಬರ್ ಮುಲ್ಲಾ, ಬಿ.ಬಿ. ಭೋವಿ, ಆದಪ್ಪ ರಾಮೋಡಗಿ, ಹೊನ್ನಪ್ಪ ವಾಲೀಕಾರ, ಸಚಿನ ಇಂಗಳೇಶ್ವರ ಇದ್ದರು. ದಾವಣಗೆರೆಯ ಬಸವಕಲಾ ಲೋಕದ ಗೆಳೆಯರು ಪ್ರಾರ್ಥಿಸಿದರು. ಸೌಜನ್ಯಾ ಬಾಗೇವಾಡಿ ಸ್ವಾಗತ ಗೀತೆ ಹಾಡಿದರು. ಎಂ.ಎಸ್. ಗುಡಗುಂಟಿ ಸ್ವಾಗತಿಸಿ ನಿರೂಪಿಸಿದರು. ಮಲ್ಲಣ್ಣ ರಕ್ಕಸಗಿ ವಂದಿಸಿದರು. ದೇವಸ್ಥಾನ ನಿರ್ಮಾಣಕ್ಕೆ ಸಹಕಾರ ನೀಡಿದ ದಾನಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮಗಳಲ್ಲಿ, ಶುಭ ಸಮಾರಂಭಗಳಲ್ಲಿ ಶಾಲು ಹಾಕಿ ಸನ್ಮಾನಿಸುವ ಪದ್ದತಿಗಿಂತ ನೇಕಾರರು ನೇಯ್ದ ಟಾವೆಲ್‌ಗಳನ್ನು ಶಾಲಿನ ಮಾದರಿಯಲ್ಲಿ ಬಳಸಿ ಸತ್ಕರಿಸುವುದರಿಂದ ಸನ್ಮಾನಿಸಿದ ಬಟ್ಟೆ ಉಪಯೋಗಕ್ಕೂ ಬರುತ್ತದೆ. ನೇಕಾರರಿಗೆ ನೆರವಾದಂತೆಯೂ ಆಗುತ್ತದೆ. ಶಾಲು ಬಳಸಿ ಮೂಲೆಗೆಸೆಯುವ ಬದಲು ಟಾವೆಲ್‌ಗಳ ಬಳಕೆಗೆ ನಾವೆಲ್ಲ ಒತ್ತು ನೀಡಬೇಕು.
ಜಿ. ಸೋಮಶೇಖರ, ಕೆಕೆಜಿಎಸ್ ಸೇವಾ ಟ್ರಸ್ಟ್ ಮುಖ್ಯಸ್ಥ.