ಹೊಳೆನರಸೀಪುರ ತಾಲೂಕು ಕುರುಬರ ಸಂಘದಿಂದ ಸಚಿವ ಡಾ.ಅಶ್ವತ್ಥ ನಾರಾಯಣ ವಿರುದ್ಧ ಪ್ರತಿಭಟನೆ ನಡೆಸಲಾಯಿತು. 
ಜಿಲ್ಲೆ

ಕುರುಬರ ಸಂಘದ ಪ್ರತಿಭಟನೆ

ಹೊಳೆನರಸೀಪುರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕೆಂಬ ಹೇಳಿಕೆ ನೀಡಿರುವ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರನ್ನು ಬಂಧಿಸುವಂತೆ ಆಗ್ರಹಿಸಿ ಶುಕ್ರವಾರ ತಾಲೂಕು ಕುರುಬರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಕನಕ ಭವನದಿಂದ ಅಂಬೇಡ್ಕರ್ ವೃತ್ತ, ಸುಭಾಷ್ ವೃತ್ತ, ಗಾಂಧಿ ವೃತ್ತದ ಮೂಲಕ ನೂರಾರು ಮಂದಿ ಮೆರವಣಿಗೆಯಲ್ಲಿ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ವಿಶ್ವನಾಥ್ ಅವರಿಗೆ ಮನವಿ ಸಲ್ಲಿಸಿದರು. ಗಾಂಧಿವೃತ್ತದಲ್ಲಿ ಅಶ್ವತ್ಥ ನಾರಾಯಣ ಪ್ರತಿಕೃತಿ ದಹಿಸಿ, ಸಚಿವರ ವಿರುದ್ದ ಘೋಷಣೆ ಕೂಗಿದರು.
ಚೋಳೇನಹಳ್ಳಿ ಸುರೇಶ್ ಮಾತನಾಡಿ, ಪ್ರಜಾಪ್ರಭುತ್ವದ ಅರ್ಥ ಗೊತ್ತಿಲ್ಲದ ಸಚಿವ ಅಶ್ವತ್ಥ ನಾರಾಯಣ ಅವರಿಗೆ ಜನಪ್ರತಿನಿಧಿಯಾಗುವ ಯೋಗ್ಯತೆ ಇಲ್ಲ. ಹೊಡಿ-ಬಡಿ ಸಂಸ್ಕೃತಿ ಪ್ರದರ್ಶಿಸಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಬೇಕು. ಅವರ ವಿರುದ್ಧ ದೂರು ದಾಖಲಿಸಿ ಕಠಿಣ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಸಂಘದ ಉಪಾಧ್ಯಕ್ಷ ಬಾಗೀವಾಳು ಮಂಜೇಗೌಡ, ಪ್ರಧಾನ ಕಾರ್ಯದರ್ಶಿ ಎಂ.ವಿ.ದಾಶರಥಿ, ಕುರುಬ ಸಮಾಜದ ಮುಖಂಡರುಗಳಾದ ಬಂಟರತಳಾಲು ರಾಜೇಗೌಡ, ದೇವರಮುದ್ದನಹಳ್ಳಿ ಪುಟ್ಟರಾಜು, ಮಲ್ಲಪ್ಪನಹಳ್ಳಿ ಮೋಹನ, ರಂಗೇನಹಳ್ಳಿ ಕುಮಾರ್, ಎಳ್ಳೇಶಪುರದ ನಂಜೇಗೌಡ, ವಕೀಲ ಪುಟ್ಟರಾಜು, ಹಳ್ಳಿಮೈಸೂರು ಧರ್ಮಪಾಲ್ ಇತರರು ಇದ್ದರು.