ಗುಂಡ್ಲುಪೇಟೆಯ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಸಿ.ಎಸ್.ನಿರಂಜನಕು ಮಾರ್ ಮಾತನಾಡಿದರು. ರವಿಶಂಕರ್, ಎಸ್.ಸಿ.ಶಿವಮೂರ್ತಿ, ಪಿ.ಗಿರೀಶ್. ಆರ್.ಹೇಮಂತರಾಜು, ಎಲ್.ಸುರೇಶ್ ಇದ್ದರು.  
ಜಿಲ್ಲೆ

ಕುರುಬ ಜನಾಂಗದವರಿಗೆ 250 ನಿವೇಶನ ಮಂಜೂರು


ಶಾಸಕ ಸಿ.ಎಸ್.ನಿರಂಜನಕುಮಾರ್ ಮಾಹಿತಿ


ಗುಂಡ್ಲುಪೇಟೆ: ದಾಸ ಶ್ರೇಷ್ಠರೆಂದು ಹೆಸರಾದ ಕನಕದಾಸರು ಕನ್ನಡಿಗರು ಎಂಬುದು ಹೆಮ್ಮೆಯ ವಿಷಯ ಎಂದು ಶಾಸಕ ಸಿ.ಎಸ್.ನಿರಂಜನಕುಮಾರ್ ಹೇಳಿದರು.

ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ ದರು. ತಿಮ್ಮಪ್ಪನಾಯಕರಾಗಿದ್ದ ಕನಕದಾಸರು ಜೀವನ ನಶ್ವರತೆಯಿಂದ ವೈರಾಗ್ಯಕ್ಕೊಳಗಾಗಿದ್ದರು. ಅವರ ಭಕ್ತಿಗೆ ಮೆಚ್ಚಿದ ಶ್ರೀ ಕೃಷ್ಣ ಕಿಟಕಿಯಲ್ಲಿ ದರ್ಶನ ನೀಡಿದ ಕನಕನ ಕಿಂಡಿ ಇಂದಿಗೂ ಉಡುಪಿಯಲ್ಲಿದೆ. ಕರ್ನಾಟಕ ಸಂಗೀತಕ್ಕೆ ಮೂಲಪುರುಷರಾದ ದಾಸರು ಸಂಗೀತ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರನ್ನು ಒಂದು ವರ್ಗಕ್ಕೆ ಸೀಮಿತಗೊಳಿಸದೆ ಅವರ ತತ್ವಗಳನ್ನು ಎಲ್ಲರೂ ಅನುಸರಿಸುವ ಮೂಲಕ ವಿಶ್ವಮಾನ್ಯರನ್ನಾಗಿಸಬೇಕು ಎಂದರು.

ತಾಲೂಕಿನ ಚಿಕ್ಕಾಟಿ, ಕಲಿಗೌಡನಹಳ್ಳಿ, ಸಂಗೇಗೌಡನಹಳ್ಳಿ, ಕಬ್ಬಹಳ್ಳಿ ಮುಂತಾದ ಗ್ರಾಮಗಳಲ್ಲಿ ನೆಲೆಸಿರುವ ಕುರುಬ ಜನಾಂಗದ ನಿವಾಸಿಗಳ ಬಡಾವಣೆಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡಲಾಗಿದೆ. ಪಟ್ಟಣದ ಹೊರವಲಯದ ಶ್ರೀರಾಮದೇವರ ಗುಡ್ಡದ ಬಳಿ ನಿರ್ಮಿಸುತ್ತಿರುವ 1400 ನಿವೇಶನಗಳಲ್ಲಿ 250 ನಿವೇಶನವನ್ನು ಕುರುಬ ಜನಾಂಗದವರಿಗೆ ಮಂಜೂರು ಮಾಡಲಾಗಿದೆ. ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿರುವ ಕನಕ ಭವನ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದು, ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಹಾಗೂ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ತಹಸೀಲ್ದಾರ್ ರವಿಶಂಕರ್, ಶಿರಸ್ತೇದಾರ್ ಮಹೇಶ್, ಬಿಇಒ ಎಸ್.ಸಿ.ಶಿವಮೂರ್ತಿ, ಪುರಸಭೆ ಅಧ್ಯಕ್ಷ ಪಿ.ಗಿರೀಶ್. ಮುಖ್ಯಾಧಿಕಾರಿ ಆರ್.ಹೇಮಂತರಾಜು, ಮಾಜಿ ಅಧ್ಯಕ್ಷ ಎಲ್.ಸುರೇಶ್, ಮುಖ್ಯ ಭಾಷಣಕಾರ ರಾಮೇಗೌಡ ಇದ್ದರು.