ಕಂಪ್ಲಿ: ಕಾರ್ಮಿಕರ ಅನುಕೂಲಕ್ಕಾಗಿ ಕಂಪ್ಲಿ, ಕುರುಗೋಡಿನಲ್ಲಿ ತಲಾ 5 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಮಿಕ ಭವನ ನಿರ್ಮಿಸಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಸಕ್ಕರೆ ಕಾರ್ಖಾನೆಯ ಕೋದಂಡರಾಮ ದೇವಸ್ಥಾನ ಆವರಣದಲ್ಲಿ ರಾಜ್ಯ ಶ್ರಮಜೀವಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ತಾಲೂಕು ಸೇವಾ ಸಂಘ ಉದ್ಘಾಟಿಸಿ ಬುಧವಾರ ಮಾತನಾಡಿದರು. ತುಳಿತಕ್ಕೊಳಗಾದವರಿಗೆ ನ್ಯಾಯ ಕಲ್ಪಿಸುವಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವಿರತ ಶ್ರಮಿಸುತ್ತಿದ್ದಾರೆ. ರಾಜ್ಯದಲ್ಲಿಯೇ ಮೊದಲ ಕಾರ್ಮಿಕರ ಮಕ್ಕಳ ಶಾಲೆ ಕುರುಗೋಡಿನಲ್ಲಿ ಆರಂಭಿಸಲಾಗುವುದು ಎಂದರು.
ಸಂಘದ ರಾಜ್ಯಾಧ್ಯಕ್ಷ ಶಿವಕುಮಾರಗೌಡ ಮಾತನಾಡಿ, ಕಾರ್ಮಿಕರಲ್ಲಿ ಒಳ ರೋಗಗಳು ಹೆಚ್ಚುತ್ತಿದ್ದು ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಕಾರ್ಮಿಕರು ಜಾಗೃತಿ ತೋರಬೇಕು. ಕಾರ್ಮಿಕ ಇಲಾಖೆಯ ಸದಸ್ಯತ್ವ ಪಡೆದುಕೊಂಡು ಕಾರ್ಯನಿರತರಾಗಬೇಕು. ಕಾರ್ಮಿಕ ಇಲಾಖೆಯ ನಾನಾ ಸೌಲಭ್ಯಗಳನ್ನು ಸದ್ಭಳಕೆ ಮಾಡಿಕೊಳ್ಳುವಂತೆ ಹೇಳಿದರು. ಹಿರಿಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರನ್ನು ಗೌರವಿಸಲಾಯಿತು.
ಪ್ರಮುಖರಾದ ಕೆ.ಶ್ರೀನಿವಾಸರಾವ್, ತಿಮ್ಮಪ್ಪ, ಬಿ.ಲಕ್ಷ್ಮಣ, ಪಂಪಾಪತಿ ಇಂಗಳಗಿ, ಬಿ.ಶೇಖರ್, ಬಾಬುಸಾಬ್ ಮೇಸ್ತ್ರಿ, ಶ್ರೀಹರಿ, ರವಿಶೇಖರ್, ಸುರೇಶ್, ಮಹೇಶ್‌ಗೌಡ, ಶಿವಪ್ರಸಾದ್, ಸುಬ್ರಹ್ಮಣ್ಯ, ಗಾದಿಲಿಂಗಪ್ಪ ಇತರರಿದ್ದರು.